
ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಮುಗಿದಿದೆ.
ಈ ದಿನದಂದು ಜೋ ರೂಟ್ ಅವರ ಶತಕ ಹಾಗೂ ಜೇಮೀ ಸ್ಮಿತ್ ಮತ್ತು ಬ್ರೈಡನ್ ಕಾರ್ಸೆ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್ಗಳಿಗೆ ಆಲೌಟ್ ಆಯಿತು.
ಆ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ಎರಡನೇ ದಿನದಾಟದ ಅಂತ್ಯದ ವೇಳೆಗೆ ಮೂರು ವಿಕೆಟ್ ಕಳೆದುಕೊಂಡು 145 ರನ್ ಗಳಿಸಿದೆ.
ಆಟದ ಅಂತ್ಯಕ್ಕೆ, ಕೆಎಲ್ ರಾಹುಲ್ 113 ಎಸೆತಗಳಲ್ಲಿ 53 ರನ್ ಮತ್ತು ರಿಷಭ್ ಪಂತ್ 33 ಎಸೆತಗಳಲ್ಲಿ 19 ರನ್ ಬಾರಿಸಿ ಕ್ರೀಸ್‌ನಲ್ಲಿದ್ದಾರೆ. ಭಾರತ ಪ್ರಸ್ತುತ ಇಂಗ್ಲೆಂಡ್‌ಗಿಂತ 242 ರನ್‌ಗಳ ಹಿಂದಿದೆ.
ಭಾರತಕ್ಕೆ ಆರಂಭಿಕ ಆಘಾತ
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಯಶಸ್ವಿ ಜೈಸ್ವಾಲ್ ಎಂಟು ಎಸೆತಗಳಲ್ಲಿ ಮೂರು ಬೌಂಡರಿಗಳ ಸಹಾಯದಿಂದ 13 ರನ್ ಬಾರಿಸಿ ಜೋಫ್ರಾ ಆರ್ಚರ್ ಎಸೆತದಲ್ಲಿ ಹ್ಯಾರಿ ಬ್ರೂಕ್ ಅವರಿಗೆ ಕ್ಯಾಚ್ ನೀಡಿದರು.
ಇದಾದ ನಂತರ, ಕೆಎಲ್ ರಾಹುಲ್ ಮತ್ತು ಕರುಣ್ ನಾಯರ್ ಇನ್ನಿಂಗ್ಸ್ ನಿಭಾಯಿಸಿ ಎರಡನೇ ವಿಕೆಟ್‌ಗೆ 61 ರನ್‌ಗಳ ಜೊತೆಯಾಟ ನಡೆಸಿದರು.
ಬೆನ್ ಸ್ಟೋಕ್ಸ್ ಕರುಣ್ ಅವರನ್ನು ಔಟ್ ಮಾಡುವ ಮೂಲಕ ಈ ಜೊತೆಯಾಟವನ್ನು ಮುರಿದರು. ಕರುಣ್ 62 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ಸಹಾಯದಿಂದ 40 ರನ್ ಗಳಿಸಿ ಔಟ್ ಮಾಡಿದರು.
ಆ ಬಳಿಕ ಬಂದ ನಾಯಕ ಶುಭ್ಮನ್ ಗಿಲ್ ಹೆಚ್ಚು ಹೊತ್ತು ಮೈದಾನದಲ್ಲಿ ಇದ್ದರಾದರೂ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗದೆ 16 ರನ್ ಬಾರಿಸಿ ಔಟಾದರು.
ವಾಸ್ತವವಾಗಿ ಗಿಲ್ ಎರಡನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಮತ್ತು ಶತಕ ಬಾರಿಸಿದ್ದರು. ಆದರೆ ಮೂರನೇ ಟೆಸ್ಟ್ನ ಮೊದಲ ಇನ್ನಿಂಗ್ಸ್‌ನಲ್ಲಿ ಅವರಿಗೆ ಬಿಗ್ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ.
ಇಂಗ್ಲೆಂಡ್ ಇನ್ನಿಂಗ್ಸ್ ಹೀಗಿತ್ತು
ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಹೀಗಾಗಿ ಮೊದಲ ಸೆಷನ್ನಲ್ಲಿಯೇ ಆತಿಥೇಯರು 3 ವಿಕೆಟ್ ಕಳೆದುಕೊಂಡರು. ಈ ಮೂರು ವಿಕೆಟ್ ಬುಮ್ರಾ ಪಾಲಾದವು.
ಬುಮ್ರಾ ಕೆಲವೇ ನಿಮಿಷಗಳ ಅಂತರದಲ್ಲಿ ಬೆನ್ ಸ್ಟೋಕ್ಸ್ (44), ಜೋ ರೂಟ್ (104) ಮತ್ತು ಕ್ರಿಸ್ ವೋಕ್ಸ್ (0) ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.
ಇದರ ನಂತರ, ಜೇಮೀ ಸ್ಮಿತ್ ಮತ್ತು ಬ್ರೈಡನ್ ಕಾರ್ಸ್ ಸ್ಫೋಟಕ ಜೊತೆಯಾಟ ಕಟ್ಟಿದರು. ಇವರಿಬ್ಬರು ಎಂಟನೇ ವಿಕೆಟ್‌ಗೆ 80 ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ನಡೆಸಿದರು.
ಈ ವೇಳೆ ದಾಳಿಗಿಳಿದ ಸಿರಾಜ್, 56 ಎಸೆತಗಳಲ್ಲಿ 51 ರನ್ ಬಾರಿಸಿದ್ದ ಜೇಮೀ ಸ್ಮಿತ್ ಅವರನ್ನು ಬಲಿಪಡೆದರು.
ಸ್ಮಿತ್- ಕಾರ್ಸ್ ಅರ್ಧಶತಕ
ಇದರ ನಂತರ ಬುಮ್ರಾ, ಜೋಫ್ರಾ ಆರ್ಚರ್ ರೂಪದಲ್ಲಿ ಇಂಗ್ಲೆಂಡ್‌ಗೆ ಒಂಬತ್ತನೇ ಹೊಡೆತ ನೀಡಿದರು. ಆದಾಗ್ಯೂ ವೇಗಿ ಬ್ರೈಡನ್ ಕಾರ್ಸ್ ಭಾರತದ ವಿರುದ್ಧ ತಮ್ಮ ಮೊದಲ ಅರ್ಧಶತಕವನ್ನು ಪೂರೈಸುವಲ್ಲಿ ಯಶಸ್ವಿಯಾದರು.
ಅವರು 83 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 56 ರನ್ ಗಳಿಸಿ ಸಿರಾಜ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.
ಇದರೊಂದಿಗೆ ಇಂಗ್ಲೆಂಡ್ ಇನ್ನಿಂಗ್ಸ್ ಕೂಡ ಅಂತ್ಯವಾಯಿತು.ಉಳಿದಂತೆ ಪಂದ್ಯದ ಆರಂಭಿಕ ದಿನದಂದು ಜ್ಯಾಕ್ ಕ್ರೌಲಿ 18, ಬೆನ್ ಡಕೆಟ್ 23, ಓಲಿ ಪೋಪ್ 44 ರನ್‌ಗಳ ಕಾಣಿಕೆ ನೀಡಿದ್ದರು.