
ನಾಳೆಯಿಂದ ಸಂಸತ್ನ ಮುಂಗಾರು ಅಧಿವೇಶನ ಆರಂಭ!
ನಾಳೆಯಿಂದ ಸಂಸತ್ನ ಮುಂಗಾರು ಅಧಿವೇಶನ (Parliament Mansoon Session) ಆರಂಭವಾಗಲಿದೆ. ಆಡಳಿತ ಮತ್ತು ವಿಪಕ್ಷಗಳ ನಡುವಿನ ಮಾತಿನ ಸಮರಕ್ಕೆ ಅಖಾಡ ಸಜ್ಜಾಗಿದೆ. ಬಿಹಾರ ವಿಧಾನಸಭಾ ಚುನಾವಣೆ ಸಮೀಪದಲ್ಲಿಯೇ ನಡೆಯಲಿರುವ ಈ ಸಂಸತ್ ಅಧಿವೇಶನ ರಾಜಕೀಯ ಸಭೆಗೆ ವೇದಿಕೆಯಾಗಲಿದೆ.
ಬಿಹಾರ ವಿಧಾನಸಭಾ ಚುನಾವಣೆ ಅಕ್ಟೋಬರ್- ನವೆಂಬರ್ನಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ, ಈ ಅಧಿವೇಶನವು ರಾಜಕೀಯ ಶಕ್ತಿಪ್ರದರ್ಶನಕ್ಕೆ ವೇದಿಕೆಯಾಗಲಿದೆ. ಇಂಡಿಯಾ ಒಕ್ಕೂಟದ ವಿರೋಧ ಪಕ್ಷಗಳಾದ ಕಾಂಗ್ರೆಸ್, ಆರ್ಜೆಡಿ, ಮತ್ತು ಟಿಎಂಸಿ, ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ, ಆಪರೇಷನ್ ಸಿಂಧೂರ, ಅಹಮದಾಬಾದ್ನ ಏರ್ ಇಂಡಿಯಾ ವಿಮಾನ ದುರಂತ, ಮತ್ತು ಭಾರತ-ಪಾಕಿಸ್ತಾನ ಕದನ ವಿರಾಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಮಧ್ಯಸ್ಥಿಕೆಯ ಬಗ್ಗೆ ಆಡಳಿತ ಪಕ್ಷವನ್ನು ತೀವ್ರವಾಗಿ ಪ್ರಶ್ನಿಸಲು ಸಿದ್ಧವಾಗಿವೆ. ಇದರ ಜೊತೆಗೆ, ಪಹಲ್ಗಾಮ್ನ ಭಯೋತ್ಪಾದಕ ದಾಳಿ ಮತ್ತು ವಿದೇಶಾಂಗ ನೀತಿಯಂತಹ ವಿಷಯಗಳನ್ನು ಎತ್ತಿಹಿಡಿಯಲು ವಿರೋಧ ಪಕ್ಷಗಳು ತಯಾರಿ ನಡೆಸಿವೆ.
ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟವು ಈ ಆರೋಪಗಳಿಗೆ ತಿರುಗೇಟು ನೀಡಲು ಸಿದ್ಧವಾಗಿದ್ದು, ತನ್ನ ಸಾಧನೆಗಳನ್ನು ಮಂಡಿಸಿ ವಿರೋಧ ಪಕ್ಷಗಳ ವಿಮರ್ಶೆಗೆ ಉತ್ತರ ನೀಡಲು ಕಾರ್ಯತಂತ್ರ ರೂಪಿಸಿದೆ. ಈ ನಡುವೆ ಕೇಂದ್ರ ಸರ್ಕಾರ ಎಂಟು ಮಸೂದೆಗಳನ್ನು ಮಂಡಿಸುವ ಲೆಕ್ಕಚಾರದಲ್ಲಿದೆ. ಆದಾಯ ತೆರಿಗೆ ಮಸೂದೆ 2025 ಕೂಡ ಲೋಕಸಭೆಯಲ್ಲಿ ಮಂಡನೆಯಾಗಲಿದ್ದು, ಇದನ್ನು ಫೆಬ್ರವರಿಯಲ್ಲಿ ಲೋಕಸಭೆಯ ಆಯ್ದ ಸಮಿತಿಗೆ ಕಳುಹಿಸಲಾಗಿತ್ತು. ಈ ವರದಿಯನ್ನು ಇಂದು ಲೋಕಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ.
ಮಣಿಪುರದಲ್ಲಿ ಫೆಬ್ರವರಿ 13ರಂದು ಜಾರಿಗೊಂಡ ರಾಷ್ಟ್ರಪತಿ ಆಳ್ವಿಕೆಯ ವಿಸ್ತರಣೆಗೆ ಸಂಸತ್ನ ಅನುಮೋದನೆಯನ್ನು ಸರ್ಕಾರ ಕೋರಲಿದೆ. ಈ ವಿಷಯವು ವಿರೋಧ ಪಕ್ಷಗಳಿಂದ ತೀವ್ರ ಚರ್ಚೆಗೆ ಕಾರಣವಾಗಲಿದೆ.
ಸಂಸತ್ನ ಈ ಮುಂಗಾರು ಅಧಿವೇಶನವು ಒಟ್ಟು 21 ಕಲಾಪಗಳನ್ನು ಒಳಗೊಂಡಿದ್ದು, ಆಗಸ್ಟ್ 12ರಿಂದ 18ರವರೆಗೆ ರಕ್ಷಾಬಂಧನ ಮತ್ತು ಸ್ವಾತಂತ್ರ್ಯ ದಿನಾಚರಣೆಗಾಗಿ ವಿರಾಮ ಘೋಷಿಸಲಾಗಿದೆ.
ಈ ಅವಧಿಯಲ್ಲಿ, ಗೋವಾದ ಶಾಸಕಾಂಗ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಗಳ ಪ್ರಾತಿನಿಧ್ಯದ ಮರುಹೊಂದಾಣಿಕೆ ಮಸೂದೆ 2024, ವಾಣಿಜ್ಯ ನೌಕಾಯಾನ ಮಸೂದೆ 2024, ಮತ್ತು ಭಾರತೀಯ ಬಂದರು ಮಸೂದೆ 2025 ಕೂಡ ಲೋಕಸಭೆಯಲ್ಲಿ ಅನುಮೋದನೆಗೆ ಕಾಯುತ್ತಿವೆ.
- ಮುಖ ಮಸೂದೆಗಳು:
- ಮಣಿಪುರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ, 2025: ರಾಜ್ಯದ ಜಿಎಸ್ಟಿ ಕಾನೂನನ್ನು ಕೇಂದ್ರ ಕಾನೂನಿಗೆ ಸಮನ್ವಯಗೊಳಿಸುವ ಗುರಿ.
- ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಮಸೂದೆ, 2025: ವ್ಯಾಪಾರ ಸುಗಮಗೊಳಿಸುವಿಕೆ ಮತ್ತು ನಿಯಂತ್ರಣ ಅನುಸರಣೆಯನ್ನು ಸುಧಾರಿಸುವ ಉದ್ದೇಶ.
- ಭಾರತೀಯ ನಿರ್ವಹಣಾ ಸಂಸ್ಥೆ (ತಿದ್ದುಪಡಿ) ಮಸೂದೆ, 2025: ಐಐಎಂ ಗುವಾಹಟಿಯನ್ನು ಐಐಎಂ ಕಾಯ್ದೆಯ ಅಡಿಯಲ್ಲಿ ಔಪಚಾರಿಕವಾಗಿ ಒಳಗೊಳ್ಳುವ ಗುರಿ.
- ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ, 2025: ತೆರಿಗೆ ಕಾನೂನುಗಳ ಸರಳೀಕರಣಕ್ಕೆ ಒತ್ತು.
- ಭೂ ಪರಂಪರೆ ತಾಣಗಳು ಮತ್ತು ಭೂಅವಶೇಷಗಳ (ಸಂರಕ್ಷಣೆ ಮತ್ತು ನಿರ್ವಹಣೆ) ಮಸೂದೆ; ಭೂವೈಜ್ಞಾನಿಕ ತಾಣಗಳ ಸಂರಕ್ಷಣೆ.
- ಕಲ್ಲುಗಣಿ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ: ಗಣಿಗಾರಿಕೆ ಕ್ಷೇತ್ರದಲ್ಲಿ ಸುಧಾರಣೆ.
- ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ: ಕ್ರೀಡಾ ಆಡಳಿತದಲ್ಲಿ ಸುಧಾರಣೆಗೆ ಒತ್ತು.
- ರಾಷ್ಟ್ರೀಯ ಡೋಪಿಂಗ್ ವಿರೋಧಿ (ತಿದ್ದುಪಡಿ) ಮಸೂದೆ: ಕ್ರೀಡೆಯಲ್ಲಿ ಡೋಪಿಂಗ್ ನಿಯಂತ್ರಣಕ್ಕೆ ಕ್ರಮ
ಇದನ್ನೂ ಓದಿ: ಧರ್ಮಸ್ಥಳ ಸುತ್ತ ಶವಗಳನ್ನು ಹೂತಿಟ್ಟ ಆರೋಪ, ಕೊನೆಗೂ SIT ರಚಿಸಿದ ಸರ್ಕಾರ!