
ಶಿಲ್ಪಾ ಶೆಟ್ಟಿ ಮತ್ತೊಮ್ಮೆ ಕನ್ನಡಿಗರ ಹೃದಯ ಗೆದ್ದಿದ್ದಾರೆ. ನಿನ್ನೆ ಮುಂಬೈನಲ್ಲಿ ಧ್ರುವಾ ಸರ್ಜಾ ಅಭಿನಯದ ‘ಕೆಡಿ’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಕೆಡಿ ಚಿತ್ರಕ್ಕೆ ಬಣ್ಣ ಹಚ್ಚಿರುವ ಶಿಲ್ಪಾ ಶೆಟ್ಟಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಆಗಿದ್ದರು. ಈ ವೇಳೆ ಅವರು ಕನ್ನಡ ಚಿತ್ರರಂಗವನ್ನು ಕೊಂಡಾಡಿದ್ದಾರೆ.
ಇದು ನನ್ನ ಮೊದಲ ಬಹುಭಾಷಾ ಸಿನಿಮಾ. 18 ವರ್ಷಗಳ ನಂತರ ಮತ್ತೆ ನಾನು ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ನಾನು ಯಾವಾಗಲೂ ಹೇಳುತ್ತೇನೆ. ನಾನು ಕರ್ನಾಟಕದ ಹುಡುಗಿ. ಕನ್ನಡದ ಹುಡುಗಿ. ಕನ್ನಡ ಸಿನಿಮಾದಲ್ಲಿ ನಟಿಸೋದು ನನಗೆ ತುಂಬಾನೇ ವಿಶೇಷ. ಪ್ರೇಮ್ ಸರ್ ಜೊತೆ ಸಿನಿಮಾ ಮಾಡೋಕೆ ಖುಷಿ ಆಯಿತು. ದಿನಪೂರ್ತಿ ಸಂಜಯ್ ದತ್ ಜೊತೆ ಆ್ಯಕ್ಟಿಂಗ್ ಮಾಡುವ ಅವಕಾಶ ಸಿಕ್ಕಿತು ಎಂದರು.
ಮೊದಲಿಗೆ ನಾನು ಸಿನಿಮಾದಲ್ಲಿ ನಟಿಸುವುದಿಲ್ಲ ಎಂದುಬಿಟ್ಟಿದ್ದೆ. ಏಕೆಂದರೆ ಒಂದರ ಹಿಂದೊಂದು ಸಿನಿಮಾ, ರಿಯಾಲಿಟಿ ಶೋನಲ್ಲಿ ಬ್ಯುಸಿ ಆಗಿದ್ದೆ. ಆದರೆ ಅದೇ ಸಮಯದಲ್ಲಿ ರೋಹಿತ್ ಶೆಟ್ಟಿಯ ವೆಬ್ ಸರಣಿಯಲ್ಲಿ ನಟಿಸುವಾಗ ಅಪಘಾತವಾಗಿ ಕಾಲು ಮುರಿದುಕೊಂಡು ವೀಲ್ ಚೇರ್ನಲ್ಲಿ ಕೂರಬೇಕಾಯ್ತು. ಆಗ ನನ್ನ ಮ್ಯಾನೇಜರ್ ನನಗೆ ಬಲವಂತ ಮಾಡಿ ಕತೆ ಕೇಳುವಂತೆ ಹೇಳಿದರು ಎಂದಿದ್ದಾರೆ.
ಅಂದ್ಹಾಗೆ ಶಿಲ್ಪಾ ಶೆಟ್ಟಿ ಕನ್ನಡ ಸಿನಿಮಾದಲ್ಲಿ ನಟಿಸುತ್ತಿರೋದು ಇದೇ ಮೊದಲಲ್ಲ. ಈ ಹಿಂದೆ ರವಿಚಂದ್ರನ್ ಜೊತೆಗೆ ಎರಡು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರೀತ್ಸೋದ್ ತಪ್ಪಾ, ‘ಒಂದಾಗೋಣ ಬಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಉಪೇಂದ್ರ ನಟನೆಯ ಆಟೋ ಶಂಕರ್ ಚಿತ್ರದಲ್ಲೂ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ಇದೀಗ ಧ್ರುವ ಅಭಿನಯದ ಕೆಡಿ ಚಿತ್ರದಲ್ಲೂ ನಟಿಸುತ್ತಿದ್ದಾರೆ. ‘ಕೆಡಿ’ ಸಿನಿಮಾನಲ್ಲಿ ಸತ್ಯವತಿ ಹೆಸರಿನ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ಟೀಸರ್ನಲ್ಲಿ ಶಿಲ್ಪಾ ಶೆಟ್ಟಿ ಅವರು ಸೀರೆ ಉಟ್ಟು ಇಂಟೆನ್ಸ್ ಲುಕ್ ಕೊಟ್ಟಿದ್ದಾರೆ.