
ಕ್ಯಾಲಿಫೋರ್ನಿಯಾ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ISS) ಯಶಸ್ವಿಯಾಗಿ ತಲುಪಿ ಇತಿಹಾಸ ಸೃಷ್ಟಿಸಿರುವ ಭಾರತೀಯ ಗಗನಯಾತ್ರಿ, ಐಎಎಫ್ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳು ಭೂಮಿಗೆ ವಾಪಸ್ ಆಗಿದ್ದಾರೆ. ನಗುಮುಖದಲ್ಲಿ ಕ್ಯಾಪ್ಸುಲ್‌ನಿಂದ ಹೊರಬಂದು ಶುಭಾಂಶು ಶುಕ್ಲಾ ಕೈಬೀಸಿದರು.
ಇಂದು ಭಾರತೀಯ ಕಾಲಮಾನ ಮಧ್ಯಾಹ್ನ 3ಕ್ಕೆ ಕ್ಯಾಲಿಫೋರ್ನಿಯಾ (California) ಕರಾವಳಿಯಲ್ಲಿ ಯಶಸ್ವಿಯಾಗಿ ಸ್ಪ್ಯಾಷ್ ಡೌನ್ ಮಾಡಲಾಯಿತು. ಬಳಿಕ ಕ್ಯಾಪ್ಸುಲ್ ಸುರಕ್ಷಿತವಾಗಿದೆಯೇ ಎಂದು ಪರಿಶೀಲಿಸಿದ ಬಳಿಕ ಕೆಳಗಡೆ ಇರುವ ಬಾಗಿಲು(ಹ್ಯಾಚ್) ತೆರೆಯಲಾಯಿತು. ಈ ಬಾಗಿಲಿನ ಮೂಲಕ ಯಾನಿಗಳನ್ನು ಸ್ಪೇಸ್ ಎಕ್ಸ್ ಸಿಬ್ಬಂದಿ ಹೊರಗೆ ನಿಧಾನವಾಗಿ ಎಳೆದು ಕೈಹಿಡಿದು ಕರೆದುಕೊಂಡು ಹೋದರು. ಈ ವೇಳೆ ಎರಡನೇಯದಾಗಿ ಹೊರಬಂದ ಶುಭಾಂಶು ಶುಕ್ಲಾ ನಗುಮುಖದಿಂದ ಕೈಬೀಸಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಪ್ಸುಲ್‌ನಿಂದ ಹೊರಬಂದ ಬಳಿಕ ವೈದ್ಯಕೀಯ ತಪಾಸಣೆ ಮಾಡಿ ಕ್ವಾರಂಟೈನ್ ಮಾಡಲಾಗುತ್ತದೆ. ಸಾಮಾನ್ಯವಾಗಿ ಗಗನಯಾತ್ರಿಗಳಿಗೆ ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು 7 ದಿನಗಳ ವಿಶ್ರಾಂತಿಯ ಅವಶ್ಯಕತೆಯಿರುತ್ತದೆ. ಇನ್ನೂ ಯಶಸ್ವಿ ಲ್ಯಾಂಡಿಂಗ್ ಬಳಿಕ ಶುಭಾಂಶು ಶುಕ್ಲಾ ಕುಟುಂಬಸ್ಥರು ಸಂಭ್ರಮಿಸಿದ್ದಾರೆ.
ಪ್ರಕ್ರಿಯೆ ಹೇಗಿತ್ತು?
ಸೋಮವಾರ (ಜು.14) ಭಾರತೀಯ ಕಾಲಮಾನ ಮಧ್ಯಾಹ್ನ 2:30ಕ್ಕೆ ಡ್ರ್ಯಾಗನ್ ಕ್ಯಾಪ್ಸುಲ್ ಪ್ರವೇಶಿಸಿ, ಸಂಜೆ 4:35ಕ್ಕೆ ಅನ್‌ಡಾಕಿಂಗ್ (ಬೇರ್ಪಡಿಸುವಿಕೆ) ಪ್ರಕ್ರಿಯೆ ಯಶಸ್ವಿಯಾಗಿತ್ತು. ಒಟ್ಟು 22.5 ಗಂಟೆಗಳ ಪ್ರಯಾಣ ಬಳಿಕ ಇಂದು ಮಧ್ಯಾಹ್ನ 3ಕ್ಕೆ ಪೆಸಿಫಿಕ್ ಮಹಾಸಾಗರದ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ 4 ಪ್ಯಾರಾಚೂಟ್‌ಗಳು ಕ್ಯಾಪ್ಸುಲ್ ವೇಗವನ್ನು ತಗ್ಗಿಸಿತ್ತು. ಯಶಸ್ವಿ ಸ್ಪ್ಯಾಷ್ ಡೌನ್ ಬಳಿಕ ಸುರಕ್ಷಿತವಾಗಿ ಶುಭಾಂಶು ಶುಕ್ಲಾ ಹಾಗೂ ಇನ್ನುಳಿದ ಮೂವರು ಗಗನಯಾತ್ರಿಗಳು ಭೂಮಿಗೆ ಬಂದಿಳಿದಿದ್ದಾರೆ.