
ಬೆಂಗಳೂರು: 3 ವರ್ಷಗಳಿಂದ ನಡೆಯುತ್ತಿದ್ದ ದೇವನಹಳ್ಳಿಯ ಚನ್ನರಾಯಪಟ್ಟಣ ಜಮೀನು ಭೂಸ್ವಾಧೀನ ವಿವಾದ ಕೊನೆಗೂ ಅಂತ್ಯವಾಗಿದೆ. 1,777 ಎಕರೆ ಭೂಸ್ವಾಧೀನಕ್ಕೆ ಸರ್ಕಾರ ಹೊರಡಿಸಿದ್ದ ಫೈನಲ್ ನೋಟಿಫಿಕೇಶನ್ಅನ್ನು ರಾಜ್ಯ ಸರ್ಕಾರ ರದ್ದು ಮಾಡೋದಾಗಿ ಘೋಷಣೆ ಮಾಡಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರೈತರು, ಹೋರಾಟಗಾರರು, ಸಂಘಟನೆಗಳ ಸಭೆಯಲ್ಲಿ ನೋಟಿಫಿಕೇಶನ್ ರದ್ದು ಮಾಡುವ ಬಗ್ಗೆ ಘೋಷಣೆ ಮಾಡಿದರು. ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 1,777 ಎಕರೆ ಜಮೀನು ಭೂಸ್ವಾಧೀನಕ್ಕೆ ಸರ್ಕಾರ ನೋಟಿಫಿಕೇಶನ್ ಹೊರಡಿಸಿತ್ತು. ಕೃಷಿ ಭೂಮಿ ಭೂಸ್ವಾಧೀನ ಮಾಡದಂತೆ ರೈತರು ಹೋರಾಟ ಮಾಡುತ್ತಿದ್ದರು. ಕೃಷಿ ಚಟುವಟಿಕೆಗಳು ಮುಂದುವರೆಸುವ ದೃಷ್ಟಿಯಿಂದ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನ ರದ್ದು ಮಾಡುತ್ತಿರೋದಾಗಿ ತಿಳಿಸಿದರು
ಒಂದು ವೇಳೆ ರೈತರು ಸ್ವಯಂ ಪ್ರೇರಿತರಾಗಿ ಜಮೀನು ಕೊಟ್ಟರೆ ಆ ಭೂಮಿ ಸರ್ಕಾರ ಪಡೆಯಲಿದೆ. ಜೊತೆಗೆ ಸೂಕ್ತ ಪರಿಹಾರ ಕೊಡುವ ಜೊತೆಗೆ ಅಭಿವೃದ್ಧಿಪಡಿಸಿದ 50% ಭೂಮಿಯನ್ನು ಜಮೀನು ಕೊಡುವ ರೈತರಿಗೆ ಕೊಡಲಾಗುತ್ತದೆ. ಸರ್ಕಾರದ ಈ ನಿರ್ಧಾರ ದೇವನಹಳ್ಳಿ ಜಮೀನಿಗೆ ಮಾತ್ರ ಅನ್ವಯ ಆಗಲಿದೆ ಎಂದು ಸ್ಪಷ್ಟಪಡಿಸಿದರು.