ಆ.27ರಿಂದ ಟ್ರಂಪ್ ಸುಂಕ ಜಾರಿ; ಮೋದಿ ನೇತೃತ್ವದಲ್ಲಿ ಸಭೆ ಸಾಧ್ಯತೆ! ಅಮೆರಿಕಕ್ಕೆ ಆಮದಾಗುವ ಭಾರತದ ಸರಕುಗಳ ಮೇಲೆ ವಿಧಿಸಿರುವ ಶೇ.50 ಸುಂಕವು ಆಗಸ್ಟ್ 27ರಿಂದ ಜಾರಿಯಾಗಲಿದೆ.
ಇದು ಭಾರತದ ಆರ್ಥಿಕತೆ (Indian Economy) ಮೇಲೆ ಹೊಡೆತ ಬೀಳಲಿದೆ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ. ಈ ಹಿನ್ನೆಲೆ ಮಂಗಳವಾರ (ಆ.26) ಪ್ರಧಾನಿ ಕಚೇರಿ (PM Office) ಮಹತ್ವದ ಸಭೆಗೆ ಮುಂದಾಗಿದೆ.
ಭಾರತೀಯ ರಫ್ತುದಾರರು ಎದುರಿಸುತ್ತಿರುವ ಪರಿಣಾಮಗಳಿಗೆ ಪರಿಹಾರ ಕಂಡುಕೊಳ್ಳುವುದು ಈ ಸಭೆಯ ಪ್ರಮುಖ ಉದ್ದೇಶವಾಗಿದೆ.
ಹಾಗಾಗಿ ಕ್ರಮಗಳನ್ನು ಪರಿಶೀಲಿಸಲು ಪ್ರಧಾನಿ ಮೋದಿ (PM Modi) ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಕರೆಯುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದಲ್ಲಿ ಮಾರಾಟ ಮಾಡಲಾಗುವ ಭಾರತದ ಸರಕುಗಳಿಗೆ ವಿಧಿಸಲಾಗಿದ್ದ ಶೇ.50 ರಷ್ಟು ಸುಂಕ ಬುಧವಾರದಿಂದ ಜಾರಿಗೆ ಬರಲಿದೆ.
ಅದರಂತೆ ಆ.27ರಿಂದ ಅಮೆರಿಕದ ಮಾರುಕಟ್ಟೆಗೆ ಪ್ರವೇಶಿಸುವ ಭಾರತೀಯ ಸರಕುಗಳು 50% ಸುಂಕಕ್ಕೆ ಒಳಪಟ್ಟಿರುತ್ತವೆ.
ಟ್ರಂಪ್ ಸುಂಕ ವಿಧಿಸಿದ್ದೇಕೆ?
ರಷ್ಯಾದ ತೈಲ ಖರೀದಿ ಮೂಲಕ ಭಾರತ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಫಂಡಿಂಗ್ ಮಾಡುತ್ತಿದೆ ಅನ್ನೋದು ಟ್ರಂಪ್ (Donald Trump) ನಂಬಿಕೆಯಾಗಿದೆ.
ಹೀಗಾಗಿ ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವಂತೆ ಹಲವು ಬಾರಿ ಟ್ರಂಪ್ ಹೇಳಿದರು. ಅಲ್ಲದೇ ಅಮೆರಿಕದ ರಾಜತಾಂತ್ರಿಕರೂ ಭಾರತಕ್ಕೆ ತೈಲ ಖರೀದಿ ನಿಲ್ಲಿಸುವಂತೆ ಎಚ್ಚರಿಸಿದರು.
ಆದರೆ ರಷ್ಯಾದ ಸ್ನೇಹ ಬಿಟ್ಟುಕೊಡದ ಭಾರತ, ತೈಲ ಖರೀದಿಯನ್ನ ಮುಂದುವರಿಸಿದೆ. ಹೀಗಾಗಿ ಆಗಸ್ಟ್ 27ರಿಂದ ಜಾರಿಗೆ ಬರುವಂತೆ ಹೆಚ್ಚುವರಿ 25% ಸುಂಕ ವಿಧಿಸಿದ್ದಾರೆ.
ಭಾರತಕ್ಕಿಂತ ಪಾಕ್ಗೆ ಕಡಿಮೆ ಸುಂಕ
ಈಗಾಗಲೇ ಆಗಸ್ಟ್ 7ರಿಂದ ಭಾರತದ ಎಲ್ಲ ಆಮದು ಸರಕುಗಳಿಗೆ ಶೇ.25ರಷ್ಟು ಸುಂಕ ವಿಧಿಸಿದ್ದಾರೆ. ಆದ್ರೆ ಪಾಕಿಸ್ತಾನಕ್ಕೆ 19% ಸುಂಕ ವಿಧಿಸಿದ್ದಾರೆ.