Uttarkashiಯಲ್ಲಿ ಮೇಘಸ್ಫೋಟ:10ಕ್ಕೂ ಅಧಿಕ ಸೈನಿಕರು ನಾಪತ್ತೆ! ದೇವಭೂಮಿ ಉತ್ತರಾಖಂಡ್ನಲ್ಲಿ ಭಯಂಕರ ಜಲಪ್ರಳಯವಾಗಿದೆ. ಒಂದರ ಹಿಂದೊಂದರಂತೆ 2 ಬಾರಿ ಮೇಘಸ್ಫೋಟವಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.
10ಕ್ಕೂ ಅಧಿಕ ಸೈನಿಕರು ಸೇರಿ 50ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ.
ಖೀರ್ ಗಂಗಾ ನದಿ ರೌದ್ರಾವತಾರಕ್ಕೆ ಉತ್ತರಕಾಶಿಯ ಧರಾಲಿ ಗ್ರಾಮ ಕೇವಲ 34 ಸೆಕೆಂಡ್ನಲ್ಲಿ ಸಂಪೂರ್ಣ ನಾಮಾವಶೇಷವಾಗಿದೆ. ಕ್ಷಣಾರ್ಧದಲ್ಲಿ ಹೆಬ್ಬಂಡೆ ಮಿಶ್ರಿತ ಕೆಸರು ನೀರು ಎಲ್ಲವನ್ನೂ ಆಪೋಶನ ಪಡೆದಿದೆ.
ಮನೆಗಳು, ಹೊಟೇಲ್ಗಳು, ಲಾಡ್ಜ್ಗಳು, ಅಂಗಡಿಗಳು ಕೊಚ್ಚಿ ಹೋಗಿವೆ. ಜನರು, ವಾಹನಗಳು ತರಗೆಲೆಯಂತೆ ಜಾರಿ ಹೋಗಿವೆ. ಕೇವಲ ಒಂದೇ ನಿಮಿಷದಲ್ಲಿ ಧರಾಲಿ ಗ್ರಾಮ ಸ್ಮಶಾನವಾಗಿದೆ.
ಭಾರಿ ಸದ್ದಿನೊಂದಿಗೆ ಯಮನಂತೆ ಎರಗಿ ಬಂದ ದೃಶ್ಯವನ್ನು ಎತ್ತರದ ಪ್ರದೇಶದಲ್ಲಿದ್ದ ಕೆಲವರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಜೋರಾಗಿ ಕೂಗಿ ಅಲ್ಲಿದ್ದವರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಆದರೆ, ಊಹಿಸದಂತೆ ಬಂದ `ಹಿಮಾಲಯನ್ ಸುನಾಮಿ’ಗೆ ಜನ ತಲ್ಲಣಗೊಂಡಿದ್ದಾರೆ.
ಕೆಲ ಪ್ರತ್ಯಕ್ಷದರ್ಶಿಗಳು ಪ್ರವಾಹ ತುಂಬಾ ಭೀಕರವಾಗಿತ್ತು. ಏನಾಗ್ತಿದೆ ಅಂತ ಅರಿವಿಗೆ ಬರೋ ಮುನ್ನವೇ ವಿನಾಶ ಸೃಷ್ಟಿಯಾಯ್ತು ಅಂದಿದ್ದಾರೆ.
ಇದರ ಮಧ್ಯೆ ಕೆಸರಿನಲ್ಲಿ ಹುದುಗಿ ಹೋಗಿದ್ದ ವ್ಯಕ್ತಿಯೊಬ್ಬ ಎಂಟೆದೆಭಂಟನಂತೆ ಎದ್ದು ಬಂದಿದ್ದಾನೆ. ಮತ್ತೊಂದ್ಕಡೆ, ಸುಕ್ಕಿ ಎಂಬಲ್ಲೂ ಕೂಡ ಮೇಘಸ್ಫೋಟವಾಗಿದೆ.
ಸೇನಾ ಕ್ಯಾಂಪ್ನಲ್ಲಿದ್ದ 11 ಸೈನಿಕರೂ ನಾಪತ್ತೆಯಾಗಿದ್ದಾರೆ. 4 ಎನ್ಡಿಆರ್ಎಫ್, ಎಸ್ಡಿಆರ್ಎಫ್, 3 ಐಟಿಬಿಪಿ ದಳಗಳು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ.