ಮಡಿಕೇರಿ ದಸರಾ| ದೇವಾಲಯಗಳಲ್ಲಿ ಯದುವೀರ್ ಒಡೆಯರ್ ಪೂಜೆ! ಮಡಿಕೇರಿ: ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆಯುವ ದಸರಾದಂತೆಯೇ ಕೊಡಗಿನ ಮಡಿಕೇರಿಯ ದಸರಾ (Madikeri Dasara) ಆಚರಣೆಯೂ ಅಷ್ಟೇ ಪ್ರಸಿದ್ಧಿಯಾಗಿದೆ. ಮೈಸೂರು ದಸರಾ (Mysuru Dasara) ಮಧ್ಯಾಹ್ನ ಆರಂಭವಾಗಿ ಸಂಜೆ ಸೂರ್ಯಾಸ್ತಮಾನದ ವೇಳೆಗೆ ಪೂರ್ಣಗೊಂಡರೆ ಮಡಿಕೇರಿ ದಸರಾ ಆರಂಭವಾಗುವುದೇ ರಾತ್ರಿಯ ವೇಳೆ.
ಹೀಗಾಗಿ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಜನರು ಮಡಿಕೇರಿಯತ್ತ ಹೆಜ್ಜೆ ಹಾಕುತ್ತಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಯದುವೀರ್ ಒಡೆಯರ್ (Yaduveer Wadiyar) ದಸರಾ ಮಂಟಪಗಳು ಹೊರಡುವ ದಶ ದೇವಾಲಯಗಳಿಗೆ ತೆರಳಿ ದಸರಾ ಯಶಸ್ವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.
ನಾಡ ಹಬ್ಬ ಮೈಸೂರು ದಸರಾಗೆ ಈಗಾಗಲೇ ದಿನಗಣನೆ ಆರಂಭವಾಗಿದೆ. ಹಬ್ಬದ ಸಂಭ್ರಮ ಕಳೆಗಟ್ಟಿದೆ. ಅಲ್ಲದೇ ಮೈಸೂರು ದಸರಾ ಮಧ್ಯಾಹ್ನ ಆರಂಭವಾಗಿ ಸಂಜೆ ಸೂರ್ಯಾಸ್ತಮಾನದ ವೇಳೆಗೆ ಪೂರ್ಣಗೊಂಡರೆ ಇತ್ತ ಮಂಜಿನ ನಗರಿ ಮಡಿಕೇರಿಯ ದಸರಾ ಆರಂಭವಾಗುವುದೇ ರಾತ್ರಿಯ ವೇಳೆ. ಹಾಗಾಗಿ ದಸರಾ ಮೈಸೂರಿನಲ್ಲಿ ಆರಂಭವಾಗಿ ಮಡಿಕೇರಿಯಲ್ಲಿ ಮುಳುಗುತ್ತದೆ ಎಂಬ ಮಾತು ಚಾಲ್ತಿಯಲ್ಲಿದೆ.
ಇಂತಹ ಅದ್ಧೂರಿಯಾದ ಮಡಿಕೇರಿ ದಸರಾ ಹಬ್ಬದ ಹಿನ್ನೆಲೆಯಲ್ಲಿ ಕೊಡಗು ಮೈಸೂರು ಸಂಸದ ಯದುವೀರ್ ಒಡೆಯರ್ ಇದೇ ಮೊದಲ ಬಾರಿಗೆ ಮಡಿಕೇರಿ ನಗರದ ದಶ ದೇವಾಲಯಗಳಿಗೆ ತೆರಳಿ ಮಡಿಕೇರಿ ದಸರಾ ಉತ್ಸವಕ್ಕೆ ವಿಶೇಷ ಪೂಜೆ ಪ್ರಾರ್ಥನೆ ನೇರವೇರಿಸಿದ್ದಾರೆ.