GAZA; ಗಾಜಾ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ! ಐವರು ಪತ್ರಕರ್ತರ ಸಾವು! ಗಾಜಾ ನಗರ (ಪ್ಯಾಲೆಸ್ಟೈನ್): ಗಾಜಾ ನಗರದಲ್ಲಿ ಇಸ್ರೇಲ್ ಭಾನುವಾರ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಒಬ್ಬ ಪ್ರಮುಖ ವರದಿಗಾರ ಸೇರಿದಂತೆ ಇಬ್ಬರು ವರದಿಗಾರರು ಮತ್ತು ಮೂವರು ಕ್ಯಾಮೆರಾಮೆನ್ಗಳು ಸಾವನ್ನಪ್ಪಿದ್ದಾರೆ ಎಂದು ಅಲ್ ಜಜೀರಾ ಹೇಳಿದೆ.
ಗಾಝಾ ನಗರದಲ್ಲಿ ಪತ್ರಕರ್ತರಿಗೆ ವಸತಿ ಕಲ್ಪಿಸಲಾಗಿದ್ದ ಟೆಂಟ್ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಪರಿಣಾಮ ಅಲ್ ಜಜೀರಾದ ಪತ್ರಕರ್ತ ಅನಾಸ್ ಅಲ್-ಶರೀಫ್ ಜೊತೆಗೆ ನಾಲ್ವರು ಸಹೋದ್ಯೋಗಿಗಳು ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.
ಮೃತರನ್ನು ಅನಾಸ್ ಅಲ್-ಶರೀಫ್, ಮೊಹಮ್ಮದ್ ಕ್ರೀಕೆಹ್ ಮತ್ತು ಕ್ಯಾಮೆರಾ ನಿರ್ವಾಹಕರಾದ ಇಬ್ರಾಹಿಂ ಜಹೀರ್, ಮೊಹಮ್ಮದ್ ನೌಫಲ್ ಮತ್ತು ಮೊವಾಮೆನ್ ಅಲಿವಾ ಎಂದು ಗುರುತಿಸಲಾಗಿದೆ.
ಅನಾಸ್ ಅಲ್-ಶರೀಫ್ ಪತ್ರಕರ್ತರಂತೆ ನಟಿಸುತ್ತಿದ್ದ. ಆದರೆ, ಆತ ನಿಜವಾಗಿ ಭಯೋತ್ಪಾದಕ ಎಂದು ಇಸ್ರೇಲ್ ಹೇಳಿಕೊಂಡಿದೆ.
ಅಲ್-ಶರೀಫ್ ಹಮಾಸ್ ಘಟಕದ ಮುಖ್ಯಸ್ಥನಾಗಿದ್ದ. ಇಸ್ರೇಲಿ ನಾಗರಿಕರು ಮತ್ತು ಐಡಿಎಫ್ (ಇಸ್ರೇಲಿ) ಪಡೆಗಳ ವಿರುದ್ಧ ರಾಕೆಟ್ ದಾಳಿಗಳನ್ನು ನಡೆಸುವ ಯೋಜನೆ ನಡೆಸಲಾಗಿತ್ತು. ಹೀಗಾಗಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ. ಸೇನೆಯು ಗಾಜಾದಲ್ಲಿ ಕಂಡುಬಂದ ಗುಪ್ತಚರ ಮತ್ತು ದಾಖಲೆಗಳನ್ನು ಪುರಾವೆಯಾಗಿ ಉಲ್ಲೇಖಿಸಿ ಹೇಳಿಕೆಯಲ್ಲಿ ತಿಳಿಸಿದೆ. ಈ ನಡುವೆ ಪತ್ರಕರ್ತರ ಹತ್ಯೆಯನ್ನು ಪತ್ರಕರ್ತರ ಗುಂಪುಗಳು ಮತ್ತು ಅಲ್ ಜಜೀರಾ ಖಂಡಿಸಿವೆ.
ಇನ್ನು ಸಾವಿಗೂ ಮುನ್ನ ಅಲ್-ಷರೀಫ್ ಪೋಸ್ಟ್ ಒಂದನ್ನು ಮಾಡಿದ್ದು, ಅದರಲ್ಲಿ ಸತ್ಯವನ್ನು ಜನರಿಗೆ ತಿಳಿಸಲು ಹೋರಾಡುತ್ತಿದ್ದೇನೆ. ಸಾವಿಗೂ ತಾನು ಹೆದರುವುದಿಲ್ಲ ಎಂದು ಬರೆದುಕೊಂಡಿದ್ದಾರೆ.