DHARMASTHALAದಲ್ಲಿ ಗುಂಪು ಘರ್ಷಣೆ – ಓರ್ವ ಆರೋಪಿ ಬಂಧನ! ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಬಂಧ ಧರ್ಮಸ್ಥಳ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಧರ್ಮಸ್ಥಳ ಗ್ರಾಮ ಕನ್ಯಾಡಿ (Kanyadi) ನಿವಾಸಿ, ಜೀಪು ಚಾಲಕ ಸೋಮನಾಥ ಸಪಲ್ಯ (48) ಬಂಧಿತ ಆರೋಪಿ. ಸದ್ಯ ಆರೋಪಿಯನ್ನು ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ರ್ಮಸ್ಥಳ ವಿಚಾರದಲ್ಲಿ ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆಂದು ಆರೋಪಿಸಿ ಯೂಟ್ಯೂಬರ್ಗಳ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 150ಕ್ಕೂ ಅಧಿಕ ಜನರ ವಿರುದ್ಧ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ.
ಅಕ್ರಮ ಕೂಟ ಸೇರಿದ ಆರೋಪದಲ್ಲಿ ಪೊಲೀಸರು 3 ಸುಮೊಟೊ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಅದಲ್ಲದೆ ಪರಸ್ಪರ ಹಲ್ಲೆ ನಡೆಸಿದ ಆರೋಪದಡಿಯಲ್ಲಿ ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಧರ್ಮಸ್ಥಳ ಗ್ರಾಮದ ಪ್ರಾಂಗಳದಲ್ಲಿ ಅಕ್ರಮ ಕೂಟ ಸೇರಿದ ಆರೋಪದಡಿ 2 ಎಫ್ಐಆರ್ ಹಾಗೂ ಬೆಳ್ತಂಗಡಿಯ ಉಜಿರೆ ಬೆನಕ ಆಸ್ಪತ್ರೆಯಲ್ಲಿ ಅಕ್ರಮ ಕೂಟ ಸೇರಿದ ಆರೋಪದಡಿ 1 ಎಫ್ಐಆರ್ ದಾಖಲಾಗಿದೆ.
ಬುಧವಾರ (ಆ.6) ಸಂಜೆ ಧರ್ಮಸ್ಥಳದಲ್ಲಿ ಯೂಟ್ಯೂಬರ್ಗಳ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದರು. ಬಳಿಕ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.
ಇದೇ ವೇಳೆ ವರದಿ ಮಾಡಲು ಹೋಗಿದ್ದ ಖಾಸಗಿ ವಾಹಿನಿ ವರದಿಗಾರ ಹಾಗೂ ಕ್ಯಾಮೆರಾಮ್ಯಾನ್ ಮೇಲೆಯೂ ಹಲ್ಲೆ ನಡೆಸಲಾಗಿತ್ತು.
ಧರ್ಮಸ್ಥಳ ಕ್ಷೇತ್ರ ಅಪಪ್ರಚಾರ ಸಹಿಸಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದರು. ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆಯೇ ಪೊಲೀಸರು ಲಾಠಿಚಾರ್ಜ್ ಮಾಡಿ ಚದುರಿಸಲು ಪ್ರಯತ್ನಿಸಿದರು.
ಆದರೆ, ಇದಕ್ಕೆ ಬಗ್ಗದ ಪ್ರತಿಭಟನಾಕಾರರು ಪೊಲೀಸ್ ಠಾಣೆ ಮುಂದೆ ಧರಣಿ ಕೂತಿದ್ದರು. ಕ್ಷೇತ್ರದ ತೇಜೋವಧೆ ಮಾಡುವವರನ್ನು ಬಂಧಿಸಿ ಎಂದು ಒತ್ತಾಯಿಸಿದ್ದರು.