ಬ್ಯಾಲೆಟ್ ಪೇಪರ್ – ಬೋಗಸ್ ವೋಟಿಂಗ್; ಅಶೋಕ್ ಟೀಕೆ! ರಾಜ್ಯದಲ್ಲಿ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ (Ballot Paper) ಬಳಕೆಗೆ ರಾಜ್ಯ ಸರ್ಕಾರದ ನಿರ್ಧಾರ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಬಿಜೆಪಿ (BJP) ನಾಯಕರು ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಪಕ್ಷ ನಾಯಕ ಆರ್ ಅಶೋಕ್ (R Ashok) ಎಕ್ಸ್ನಲ್ಲಿ ಕಿಡಿಕಾರಿದ್ದು, ಬ್ಯಾಲೆಟ್ ಪೇಪರ್ = ಬೋಗಸ್ ವೋಟಿಂಗ್; ಬ್ಯಾಲೆಟ್ ಪೇಪರ್ = ಬೂತ್ ಕ್ಯಾಪ್ಚರಿಂಗ್ ಎಂದು ಟೀಕಿಸಿದ್ದಾರೆ.
ಹ್ಯಾಟ್ರಿಕ್ ಝೀರೋ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಂಪೂರ್ಣ ನೆಲಕಚ್ಚಿರುವ ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ ಅವರನ್ನು ರಕ್ಷಿಸಲು,
ಚುನಾವಣಾ ಆಯೋಗದ ಬಗ್ಗೆ, ಚುನಾವಣಾ ಪ್ರಕ್ರಿಯೆ ಬಗ್ಗೆ, ಮತಯಂತ್ರಗಳ ಬಗ್ಗೆ ಇಲ್ಲಸಲ್ಲದ ಅನುಮಾನ ಬಿತ್ತು ಊಹಾಪೋಹ ಸೃಷ್ಟಿ ಮಾಡುವ ಪ್ರಯತ್ನ ಮಾಡುತ್ತಲೇ ಬಂದಿದೆ.
ಭಾರತದ ಪ್ರಜ್ಞಾವಂತ ಮತದಾರರು ಈ ಹತಾಶ ಪ್ರಯತ್ನವನ್ನ ತಿರಸ್ಕಾರ ಮಾಡುತ್ತಲೇ ಬಂದಿದ್ದಾರೆ.
ಆದರೆ ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ (ಸ್ಥಳೀಯ ಸಂಸ್ಥೆಗಳು) ಇವಿಎಂ ಯಂತ್ರ ಬದಲಾಗಿ ಮತಪತ್ರ (ಬ್ಯಾಲಟ್ ಪೇಪರ್) ಬಳಕೆಗೆ ನಿರ್ಧರಿಸಿರುವ ಕಾಂಗ್ರೆಸ್ ಸರ್ಕಾರದ ಸಂಪುಟದ ತೀರ್ಮಾನ ತೀರಾ ಕೆಳಮಟ್ಟದಾಗಿದ್ದು, ಒಬ್ಬ ವ್ಯಕ್ತಿ,
ಒಂದು ಕುಟುಂಬದ ರಕ್ಷಣೆಗಾಗಿ, ಸಮರ್ಥನೆಗಾಗಿ ಇಡೀ ದೇಶದ ಪ್ರಜಾಪ್ರಭುವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಪಾಪದ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಕೈಹಾಕಿದೆ ಎಂದು ಖಂಡನೆ ವ್ಯಕ್ತಪಡಿಸಿದ್ದಾರೆ.
ಇನ್ನು ಕಾಂಗ್ರೆಸ್ ಗೆದ್ದ ಅವಧಿಗಳನ್ನು ಪ್ರಸ್ತಾಪಿಸಿರುವ ಅಶೋಕ್, 2004ರಲ್ಲಿ ಯುಪಿಎ-1 ಸರ್ಕಾರ ಬಂದಿದ್ದು ಇದೇ ಮತಯಂತ್ರಗಳಿಂದ,
2009ರಲ್ಲಿ ಯುಪಿಯ-2 ಸರ್ಕಾರ ಬಂದಿದ್ದು ಇದೇ ಮತಯಂತ್ರಗಳಿಂದ, 2013ರಲ್ಲಿ ತಾವು ಮೊದಲ ಬಾರಿ ಮುಖ್ಯಮಂತ್ರಿಗಳಾಗಿದ್ದು ಇದೇ ಮತಯಂತ್ರಗಳಿಂದ, 2023ರಲ್ಲಿ ತಾವು ಎರಡನೇ ಬಾರಿ ಮುಖ್ಯಮಂತ್ರಿಗಳಾಗಿರುವುದು ಇದೇ ಮತಯಂತ್ರಗಳಿಂದ.
ಈಗ ಅದೇ ಮತಯಂತ್ರಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮತ್ತೊಮ್ಮೆ ಓಬೀರಾಯನ ಕಾಲದ ಮತಪೆಟ್ಟಿಗೆಗೆ ಮರಳುವ ನಿರ್ಧಾರ ಮಾಡಿದ್ದೀರಲ್ಲ ಸ್ವಾಮಿ, ಯಾರನ್ನು ಮೆಚ್ಚಿಸಲು ಈ ನಿರ್ಧಾರ ಮಾಡಿದ್ದೀರಿ?
ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಿ ಕುರ್ಚಿ ಉಳಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಇಳಿಯುತ್ತೇನೆ ಎನ್ನುವ ಸಂದೇಶ ನೀಡುವ ಮೂಲಕ ನಿಮ್ಮ ಘನತೆ, ವ್ಯಕ್ತಿತ್ವವನ್ನ ತಾವೇ ಯಾಕೆ ಕಡಿಮೆ ಮಾಡಿಕೊಳ್ಳುತ್ತೀರಿ?
ಕನ್ನಡಿಗರ ಮುಂದೆ ಯಾಕೆ ಸಣ್ಣವರಾಗುತ್ತೀರಿ? ಗೆದ್ದಾಗ ಬೀಗುವುದು, ಸೋತಾಗ ವ್ಯವಸ್ಥೆಯನ್ನ ದೂಷಿಸುವುದು ಪ್ರಜಾಪ್ರಭುತ್ವಕ್ಕೆ, ಮತದಾರರಿಗೆ, ಜನಾದೇಶಕ್ಕೆ, ಇವೆಲ್ಲವನ್ನೂ ಕೊಟ್ಟ ಸಂವಿಧಾನಕ್ಕೆ ಮಾಡುವ ಅಪಮಾನ ಅಲ್ಲವೇ ಎಂದು ಕಾಲೆಳೆದಿದ್ದಾರೆ.