Asia Cup 2025|ಭಾರತ–ಪಾಕ್ ಪಂದ್ಯಕ್ಕೆ ಕೇಂದ್ರ ನಿರ್ಬಂಧ ವಿಧಿಸಿಲ್ಲ–ಬಿಸಿಸಿಐ ಮುಂಬೈ: ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತದೊಂದಿಗೆ (India) ಸ್ನೇಹಪರವಲ್ಲದ ಯಾವುದೇ ರಾಷ್ಟ್ರದ ವಿರುದ್ಧ ಆಡದಂತೆ ಕೇಂದ್ರ ಸರ್ಕಾರ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.
ಮುಂಬರುವ ಏಷ್ಯಾಕಪ್ (Asia Cup 2025) ಟೂರ್ನಿಯಲ್ಲಿ ಭಾರತ – ಪಾಕ್ (Ind vs Pak) ಪಂದ್ಯದ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಬಿಸಿಸಿಐ ಬದ್ಧವಾಗಿದೆ, ಅದನ್ನು ನಾವು ಅನುಸರಿಸುತ್ತೇವೆ. ಆದ್ರೆ ಹೊಸ ಮಾರ್ಗಸೂಚಿಯ ಪ್ರಕಾರ ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ಸ್ನೇಹಪರವಲ್ಲದ ರಾಷ್ಟ್ರಗಳೊಂದಿಗೆ ಆಡದಂತೆ ಕೇಂದ್ರ ನಿರ್ಬಂಧ ವಿಧಿಸಿಲ್ಲ. ಆದ್ರೆ ದ್ವಿಪಕ್ಷೀಯ ಸರಣಿಗಳನ್ನು ಆಡುವಂತಿಲ್ಲ ಎಂದು ಹೇಳಿದ್ದಾರೆ.
ಏಷ್ಯಾ ಕಪ್ ಏಷ್ಯಾ ಖಂಡದ ದೇಶಗಳನ್ನು ಒಳಗೊಂಡ ಬಹುರಾಷ್ಟ್ರೀಯ ಪಂದ್ಯಾವಳಿ ಆಗಿರೋದ್ರಿಂದ ನಾವು ಭಾಗವಹಿಸಬೇಕಾಗುತ್ತೆ. ಅದೇ ರೀತಿ ಐಸಿಸಿ ಟೂರ್ನಿಗಳು ಬಂದಾಗ ಭಾರತದೊಂದಿಗೆ ಸ್ನೇಹಪರವಲ್ಲದ ರಾಷ್ಟ್ರಗಳು ಪಾಲ್ಗೊಂಡರೂ ನಾವು ಆಡಬೇಕಾಗುತ್ತದೆ. ಆದ್ರೆ ದ್ವಿಪಕ್ಷೀಯ ಸರಣಿಗಳನ್ನು ಮಾತ್ರ ಸ್ನೇಹಪರವಲ್ಲದ ರಾಷ್ಟ್ರಗಳೊಂದಿಗೆ ಆಡಲಾಗದು ಎಂದು ವಿವರಿಸಿದ್ದಾರೆ.
ಇದೇ ವೇಳೆ ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯಗಳನ್ನ ಬಹಿಷ್ಕರಿಸಿದರೆ ರಾಷ್ಟ್ರವು ಎದುರಿಸಬಹುದಾದ ನಷ್ಟದ ಬಗ್ಗೆಯೂ ಒತ್ತಿಹೇಳಿದ್ದಾರೆ.
ಏಷ್ಯಾಕಪ್ಗೆ ಭಾರತ ತಂಡ ಹೀಗಿದೆ?
ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್, ಜಿತೇಶ್ ಶರ್ಮಾ (ಡಬ್ಲ್ಯುಕೆ), ಜಸ್ಪ್ರೀತ್ ಬುಮ್ರಾ, ಅರ್ಷ್ದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹರ್ಷಿತ್ ರಾಣಾ, ರಿಂಕು ಸಿಂಗ್.
ಇದೇ ಸೆಪ್ಟೆಂಬರ್ 9ರಿಂದ ಏಷ್ಯಾಕಪ್ ಟೂರ್ನಿ ಶುರುವಾಗಲಿದ್ದು, ಸೆ.10ರಂದು ಯುಎಇ ವಿರುದ್ಧ ಭಾರತ ತನ್ನ ಮೊದಲ ಪಂದ್ಯವನ್ನಾಡಲಿದೆ. ಸೆ.14ರಂದು ಭಾರತ ಪಾಕ್ ನಡುವೆ ರೋಚಕ ಪಂದ್ಯ ನಡೆಯಲಿದೆ.