FAStag ವ್ಯವಹಾರ – ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ! ಕಳೆದ ಮೂರೂವರೆ ವರ್ಷಗಳಲ್ಲಿ ಭಾರತದಾದ್ಯಂತ ಫಾಸ್ಟ್ಸ್ಟ್ಯಾಗ್ (Fastag) ವಹಿವಾಟಿನಲ್ಲಿ ತಮಿಳುನಾಡು (Tamilnadu) ಮುಂಚೂಣಿಯಲ್ಲಿದೆ.
ಲೋಕಸಭೆಯಲ್ಲಿ ಮಂಡಿಸಿದ ಮಾಹಿತಿ ಪ್ರಕಾರ, 2022ರಿಂದ 2025ರ ಜೂನ್ ವರೆಗೆ 1.26 ಬಿಲಿಯನ್ (126 ಕೋಟಿ) ವಹಿವಾಟು ನಡೆಸುವ ಮೂಲಕ ತಮಿಳುನಾಡು ಅಗ್ರಸ್ಥಾನ ಕಾಯ್ದುಕೊಂಡಿದೆ.
ಈ ಮೂಲಕ ಹೆಚ್ಚಿನ ಸಂಚಾರವಿರುವ ಉತ್ತರ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳನ್ನು ಹಿಂದಿಕ್ಕಿದೆ.
ಕರ್ನಾಟಕದಲ್ಲಿ 1.19 ಬಿಲಿಯನ್ (119 ಕೋಟಿ) ವಹಿವಾಟು ದಾಖಲು:
ಇದೇ ಅವಧಿಯಲ್ಲಿ ಉತ್ತರ ಪ್ರದೇಶ ಮತ್ತು ಕರ್ನಾಟಕ ಕ್ರಮವಾಗಿ 1.19 ಬಿಲಿಯನ್ (119 ಕೋಟಿ) ಹಾಗೂ ಹಾಗೂ 1.12 ಬಿಲಿಯನ್ (112 ಕೋಟಿ) ವಹಿವಾಟು ದಾಖಲಾಗಿದೆ.
ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಕ್ರಮವಾಗಿ 1 ಬಿಲಿಯನ್ (100 ಕೋಟಿ) ಮತ್ತು 919 ಮಿಲಿಯನ್ (91.9 ಕೋಟಿ) ವಹಿವಾಟು ಆಗಿದೆ.
ತಮಿಳುನಾಡಿನಲ್ಲಿ ವಾರ್ಷಿಕವಾಗಿ ಅತ್ಯಧಿಕ ಮೊತ್ತದ ವಹಿವಾಟು ನಡೆದರೆ, ಉತ್ತರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ವೇಗದ ಬೆಳವಣಿಗೆಯಾಗಿದೆ.
ಉದಾಹರಣೆಗೆ ಕರ್ನಾಟಕದಲ್ಲಿ 2022ರಿಂದ 2024ರವರೆಗಿನ ವಹಿವಾಟಿನಲ್ಲಿ ಶೇ.28.7ರಷ್ಟು ಹೆಚ್ಚಳ ಆಗಿದೆ.
ದಕ್ಷಿಣ ಭಾರತದ ಗಣನೀಯ ಕೊಡುಗೆ:
2022ರಿಂದ 2024ರ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಶೇ.30.09ರಷ್ಟು ಬೆಳವಣಿಗೆಯಾಗಿದೆ. ಇದಕ್ಕೆ ವಿರುದ್ಧವಾಗಿ ತಮಿಳುನಾಡಿನಲ್ಲಿ ಎರಡು ವರ್ಷಗಳಲ್ಲಿ ಸುಮಾರು ಶೇ.16.8ರಷ್ಟು ಬೆಳವಣಿಗೆಯಾಗಿದೆ.
ಒಟ್ಟಾರೆಯಾಗಿ ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳದಿಂದ ಫಾಸ್ಟ್ಸ್ಟ್ಯಾಗ್ ಚಟುವಟಿಕೆಗೆ ಗಣನೀಯ ಕೊಡುಗೆ ನೀಡಿದಂತಾಗಿದೆ.
2022ರಿಂದ 2025ರವರೆಗೆ ಐದು ರಾಜ್ಯಗಳು ಸೇರಿ 3.71 ಬಿಲಿಯನ್ ವಹಿವಾಟು ನಡೆಸಿದೆ. ಇದು ರಾಷ್ಟ್ರದ ಒಟ್ಟು 13.69 ಬಿಲಿಯನ್ ವಹಿವಾಟಿನಲ್ಲಿ ಸರಿಸುಮಾರು ಶೇ.27.1ರಷ್ಟಿದೆ.
ಫಾಸ್ಟ್ಸ್ಟ್ಯಾಗ್ ವ್ಯವಸ್ಥೆಯಲ್ಲಿನ ದೋಷಗಳ ಬಗ್ಗೆ ಸರ್ಕಾರ ಕಳವಳ ವ್ಯಕ್ತಪಡಿಸಿದ್ದು, ಈಗಾಗಲೇ ಸಮಸ್ಯೆಯನ್ನು ಪರಿಹರಿಸಿದೆ. ತಪ್ಪಾಗಿ ಹಣ ಕಡಿತಗೊಂಡಾಗ ಟೋಲ್ ಸಂಗ್ರಹ ಏಜೆನ್ಸಿಗೆ 1 ಲಕ್ಷ ರೂ. ದಂಡ ಕೂಡಾ ವಿಧಿಸಲಾಗಿದೆ.