ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ನಿಧಾನಗತಿಯ ಆರಂಭ ಪಡೆದಿದ್ದು ಮೊದಲ ದಿನದ ಅಂತ್ಯಕ್ಕೆ 83 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 264 ರನ್ ಹೊಡೆದಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಉತ್ತಮ ಆರಂಭ ಪಡೆದಿತ್ತು. ಮೊದಲ ವಿಕೆಟಿಗೆ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ 94 ರನ್ಗಳ ಜೊತೆಯಾಟವಾಡಿದರು.
ಉತ್ತಮವಾಗಿ ಆಡುತ್ತಿದ್ದ ರಾಹುಲ್ 46 ರನ್ಗಳಿಸಿದ್ದಾಗ ಔಟ್ ಆದರು. ತಂಡದ ಮೊತ್ತ 120 ರನ್ ಆಗಿದ್ದಾಗ ಅರ್ಧಶತಕ ಹೊಡೆದ ಜೈಸ್ವಾಲ್ 58 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ನಾಯಕ ಶುಭಮನ್ ಗಿಲ್ 12 ರನ್ಗಳಿಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ನಂತರ ಬಂದ ರಿಷಭ್ ಪಂತ್ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿದರು. 37 ರನ್(48 ಎಸೆತ, 2 ಬೌಂಡರಿ, 1 ಸಿಕ್ಸರ್) ಗಳಿಸಿದ್ದಾಗ ರಿವರ್ಸ್ ಸೀಪ್ ಹೊಡೆಯಲು ಪ್ರಯತ್ನಿಸಿದಾಗ ಬಾಲ್ ನೇರವಾಗಿ ಬಲಗಾಲಿನ ಶೂಗೆ ಬಡಿಯಿತು.
ಗಂಭೀರವಾಗಿ ಗಾಯಗೊಂಡ ರಿಷಭ್ ನಂತರ ಮೈದಾನಲ್ಲೇ ಮಲಗಿದರು. ನಡೆಯಲು ಸಾಧ್ಯವಾಗದ ಕಾರಣ ಕೊನೆಗೆ ಗಾಲ್ಫ್ ಕಾರ್ಟ್ ಮೂಲಕ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು.
ಉತ್ತಮವಾಗಿ ಆಡುತ್ತಿದ್ದ ಸಾಯಿ ಸುದರ್ಶನ್ 61 ರನ್ ಗಳಿಸಿ ಔಟಾದರೆ ರವೀಂದ್ರ ಜಡೇಜಾ 19 ರನ್, ಶಾರ್ದೂಲ್ ಠಾಕೂರ್ 19 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.
ಬೆನ್ ಸ್ಟೋಕ್ಸ್ 2 ವಿಕೆಟ್ ಪಡೆದರೆ, ಕ್ರಿಸ್ ವೋಕ್ಸ್ ಮತ್ತು ಲಿಯಾಮ್ ಡಾಸನ್ ತಲಾ ಒಂದೊಂದು ವಿಕೆಟ್ ಪಡೆದರು.