ಬೆಂಗಳೂರು: ಅಧಿಕಾರ ಹಂಚಿಕೆಯ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿರುವಾಗ ಡಿಸಿಎಂ ಡಿಕೆ ಶಿವಕುಮಾರ್ ಅವರು ಕಾರ್ಯಕ್ರಮವೊಂದರಲ್ಲಿ ಕುರ್ಚಿ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದಾರೆ.
ವಕೀಲರ ಸಂಘದಿಂದ ಶುಕ್ರವಾರ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಉದ್ಘಾಟಿಸಿ ಶಿವಕುಮಾರ್ ಮಾತನಾಡಿದರು.
ಡಿಸಿಎಂ ಅವರು ಮಾತನಾಡುತ್ತಿದ್ದ ವೇಳೆ ಸಭಾಂಗಣದ ಇಕ್ಕೆಲಗಳಲ್ಲಿ ನಿಂತಿದ್ದ ವಕೀಲರನ್ನು ಉದ್ದೇಶಿಸಿ, ಇಷ್ಟೊಂದು ಕುರ್ಚಿಗಳಿವೆ ಬನ್ನಿ ಕುಳಿತುಕೊಳ್ಳಿ, ಕುರ್ಚಿ ಸಿಗುವುದೇ ಕಷ್ಟ. ಕುರ್ಚಿ ಸಿಕ್ಕಾಗ ತೆಪ್ಪಗೆ ಬಂದು ಕುಳಿತುಕೊಳ್ಳಬೇಕು.
ನಿಮ್ಮನ್ನು ನೋಡಿದರೆ ತ್ಯಾಗಿಗಳ ತರಹ ಕಾಣುತ್ತಾ ಇದ್ದೀರಿ ಎಂದು ಚಟಾಕಿ ಹಾರಿಸಿದರು.ವಕೀಲರ ಬಳಿ ನ್ಯಾಯ ಕೊಡಿಸಿ ಎಂದು ಜನರು ಬರುತ್ತಾರೆ.
ನಿಮ್ಮ ಆತ್ಮತೃಪ್ತಿಗೆ ಕೆಲಸ ಮಾಡಬೇಕು. ನಿಮ್ಮ ಬಳಿ ಬಂದ ಕಕ್ಷಿದಾರನಿಗೆ ಸಂತೋಷವಾಗುವಂತೆ ಕೆಲಸ ಮಾಡಬೇಕು. ಕಪ್ಪು ಕೋಟು ಹಾಕಿದ್ದೇನೆ ಎಂದು ಕಾನೂನನ್ನು ಕೈಗೆತ್ತಿಕೊಳ್ಳಬೇಡಿ.
ನಿಮ್ಮ ಹಾಗೂ ಪೊಲೀಸರ ನಡುವೆ ಆಗಾಗ್ಗೆ ಸಂಘರ್ಷವಾಗುತ್ತಾ ಇರುತ್ತಾರೆ. ಈ ಪೋಲಿಸರು ಮೈಮೇಲೆ ಖಾಕಿ ಬಂದ ತಕ್ಷಣ ದೇವರು ಬಂದಂತೆ ಆಡುತ್ತಾರೆ ಎಂದರು.
ನನ್ನ ತಂದೆಗೆ ನನ್ನನ್ನು ಎಂಜಿನಿಯರ್ ಮಾಡಬೇಕು ಎನ್ನುವ ಆಸೆ. ಆದರೆ ನನಗೆ ವಕೀಲನಾಗುವ ಆಸೆ. ಚಿನ್ನ, ಬೆಳ್ಳಿ ಮನೆಯಲ್ಲಿಯೇ ಇರುವುದು ಸಾಮಾನ್ಯ.
ತುರ್ತು ಪರಿಸ್ಥಿತಿ ಸಮಯದಲ್ಲಿ ನಮ್ಮ ಮನೆ ಮೇಲೆ ಅಧಿಕಾರಿಗಳು ರೈಡ್ ಮಾಡಿದ್ದರು. ರೈಡ್ ಮಾಡಿದ ಅಧಿಕಾರಿ ಎಂಜಿನಿಯರ್. ಅದಕ್ಕೆ ನಮ್ಮ ತಂದೆಗೆ ಓದಿಸಬೇಕು ಎನ್ನುವ ಛಲ. ಆದರೆ ಅವರ ಆಸೆ ಕೈಗೂಡಲಿಲ್ಲ ಎಂದರು.