
ನವದೆಹಲಿ: ಬಿಜೆಪಿಯಲ್ಲಿ ಮತ್ತೆ 75 ವರ್ಷಕ್ಕೆ ರಾಜಕೀಯ ನಿವೃತ್ತಿ ವಿಷಯ ಚರ್ಚೆಗೆ ಬಂದಿದೆ. 75ನೇ ವರ್ಷಕ್ಕೆ ಕಾಲಿಡುವುದು ಪ್ರಕೃತಿಯು ವಿರಾಮ ತೆಗೆದುಕೊಂಡು ಇತರರಿಗೆ ದಾರಿ ಮಾಡಿಕೊಡುವ ಸಂಕೇತವಾಗಿದೆ ಎಂದು ಮೋಹನ್ ಭಾಗವತ್ ಹೇಳಿಕೆ ವ್ಯಾಪಕ ಚರ್ಚೆಗೀಡಾಗಿದೆ.
ನಾಗ್ಪುರದಲ್ಲಿ ಆರ್ಎಸ್ಎಸ್ ಚಿಂತಕ ಮೊರೋಪಂತ್ ಪಿಂಗಳೆ ಸ್ಮರಣಾರ್ಥ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಭಾಗವತ್ ಮಾತಾಡಿದ್ದರು. ಪಿಂಗಳೆ ಅವರು ರಾಷ್ಟ್ರೀಯ ಸೇವೆಗೆ ಸಮರ್ಥವಾಗಿ ಬದ್ಧರಾಗಿದ್ದರೂ, ವಯಸ್ಸು ಆದ ನಂತರ ಸೊಗಸಾಗಿ ಮುಖ್ಯವಾಹಿನಿಯಿಂದ ಹಿಂದೆ ಸರಿಯುವುದರಲ್ಲಿ ನಂಬಿಕೆ ಇಟ್ಟಿದ್ದರು ಅಂದಿದ್ದಾರೆ. ಈ ಹೇಳಿಕೆಯನ್ನು ವಿಪಕ್ಷಗಳು ಬಳಕೆ ಮಾಡಿಕೊಂಡು ಬಿಜೆಪಿ ಮೇಲೆ ಮುಗಿಬಿದ್ದಿವೆ.
ಕಾಂಗ್ರೆಸ್ನ ಜೈರಾಮ್ ರಮೇಶ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ವಿದೇಶ ಪ್ರವಾಸ ಮುಗಿಸಿ ನೀವು ಭಾರತಕ್ಕೆ ಹಿಂತಿರುಗುತ್ತಿರುವ ಸಂದರ್ಭದಲ್ಲಿ ಎಂತಹ ಸುದ್ದಿಯಾಗಿದೆ. ಸೆಪ್ಟೆಂಬರ್ 17ಕ್ಕೆ ನಿಮಗೆ 75 ವರ್ಷ ತುಂಬುತ್ತದೆ ಎಂದು ಸರಸಂಘಚಾಲಕ್ ನೆನಪಿಸಿದ್ದಾರೆ ಎಂದು ಕಾಲೆಳೆದಿದ್ದಾರೆ. ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ಮಾತಾಡಿ, ಬೇರೆಯವರಿಗೆ ಬೋಧಿಸುವ ಮುನ್ನ ತಾವು ಅಭ್ಯಾಸ ಮಾಡಬೇಕು ಅಂತ ಮೋದಿಗೆ ಟಾಂಗ್ ಕೊಟ್ಟಿದ್ದಾರೆ.