ಆಲಮಟ್ಟಿ ಅಣೆಕಟ್ಟು ಎತ್ತರಿಸುವ ಬದ್ಧತೆ ನಮ್ಮ ಸರ್ಕಾರಕ್ಕೆ ಇದೆ: ಡಿಕೆಶಿ! ವಿಜಯಪುರ: ಆಲಮಟ್ಟಿ ಅಣೆಕಟ್ಟು ಎತ್ತರವನ್ನು 518 ಮೀ.ನಿಂದ 524 ಮೀ. ಎತ್ತರಿಸುವ ಬಗ್ಗೆ ಆದ್ಯತೆ ಮತ್ತು ಬದ್ಧತೆ ನಮ್ಮ ಸರ್ಕಾರಕ್ಕಿದೆ.
ಮುಂದಿನ ಒಂದು ವಾರದೊಳಗೆ ಭೂಸ್ವಾಧೀನಕ್ಕೆ ನಿಗದಿ ಮಾಡಿರುವ ಬೆಲೆ ಘೋಷಣೆ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಆಲಮಟ್ಟಿ ಅಣೆಕಟ್ಟಿನಲ್ಲಿ ಕೃಷ್ಣಾ ನದಿಗೆ ಶನಿವಾರ ಬಾಗಿನ ಅರ್ಪಣೆ ನಂತರ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯವರು ಹಾಗೂ ಯೋಜನೆ ವ್ಯಾಪ್ತಿಯ ಜನಪ್ರತಿನಿಧಿಗಳ ಸಭೆ ನಡೆಸಿ ಬೆಲೆ ನಿಗದಿ ತೀರ್ಮಾನ ಮಾಡಲಾಗುವುದು.
ಯಾವುದೇ ಮೇಲ್ಮನವಿ ಇಲ್ಲದಂತೆ ಒಂದೇ ಹಂತದ ಒಪ್ಪಿತ ಭೂಸ್ವಾಧೀನಕ್ಕೆ ಮುಖಂಡರು, ಜನಪ್ರತಿನಿಧಿಗಳು ಒಪ್ಪಿಗೆ ನೀಡಬೇಕು.
ಪುನರ್ವಸತಿ ಬಗ್ಗೆ ಪ್ರತ್ಯೇಕ ತೀರ್ಮಾನ ಮಾಡಲಾಗುವುದು. ಸಮುದ್ರಕ್ಕೆ ಹೋಗುತ್ತಿರುವ ನೀರನ್ನು ನಮ್ಮ ಜನರಿಗೆ ನೀರಾವರಿ ಕಲ್ಪಿಸುವುದು ನಮ್ಮ ಸಂಕಲ್ಪ. ಇದನ್ನು ಇದೇ ಅವಧಿಯಲ್ಲಿ ಮಾಡಲು ಮುಂದಾಗಿದ್ದೇವೆ ಎಂದರು.
ಮುಳುಗಡೆ ಜಮೀನುಗಳಿಗೆ ಉದಾರ ಮನಸ್ಸಿನಿಂದ ಪರಿಹಾರ ನೀಡಬೇಕು. ಕಾಲುವೆಗಳು ಹಾದು ಹೋಗುವ ಕಡೆ ರೈತರಿಗೆ ಅನುಕೂಲವಾಗುವುದರಿಂದ ಇಂತಿಷ್ಟೇ ಪರಿಹಾರ ಬೇಕು ಎನ್ನುವ ಬೇಡಿಕೆಯಿಲ್ಲ ಎಂದು ಶಾಸಕರಾದ ಯಶವಂತರಾಯ ಗೌಡ ಪಾಟೀಲರು ಅಭಿಪ್ರಾಯ ತಿಳಿಸಿದ್ದಾರೆ. ಶಿವಾನಂದ ಪಾಟೀಲರು, ಎಂ.ಬಿ.ಪಾಟೀಲರು ಸಹ ತಮ್ಮ ಸಲಹೆಗಳನ್ನು ನೀಡಿದ್ದಾರೆ.
ನಾವು ಕೇಂದ್ರದ ಮೇಲೆ ಹಾಕುತ್ತಿರುವ ಒತ್ತಡ ನೋಡಿದರೆ, ಯಾವ ಕ್ಷಣದಲ್ಲಿ ಬೇಕಾದರೂ ಅಧಿಸೂಚನೆ ಹೊರಡಿಸಬಹುದು. ನಮ್ಮ ಪಾಲು ನಮಗೆ ಸಿಗಲೇಬೇಕು. ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ಜನರು ಸಹಕಾರ ನೀಡಬೇಕು.
ನಾವು ಎಲ್ಲಾ ಪಕ್ಷದ ಶಾಸಕರ ಜೊತೆ ಚರ್ಚೆ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದೇವೆ ಎಂದು ತಿಳಿಸಿದರು.