ಚಿನ್ನಸ್ವಾಮಿ ಕೈತಪ್ಪಿದ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಗಳು! ಬೆಂಗಳೂರು: ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಮಹಿಳಾ ಏಕದಿನ ವಿಶ್ವಕಪ್ (Women World Cup-2025) ಪಂದ್ಯಗಳನ್ನ ಬೆಂಗಳೂರಿನಲ್ಲಿ ನಡೆಸಲು ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದೆ.
ಕೆಎಸ್ಸಿಎ ಮಹಾರಾಜ ಟಿ-20 ಟ್ರೋಫಿ ಪಂದ್ಯಗಳು ಬಳಿಕ ವಿಶ್ವಕಪ್ ಪಂದ್ಯಗಳು ಕೂಡ ಬೇರೆಡೆಗೆ ಸ್ಥಳಾಂತರಗೊಂಡಿವೆ.
ಹೀಗಾಗಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಎಲ್ಲಾ ಪಂದ್ಯಗಳು ಬೇರೆಡೆಗೆ ಶಿಫ್ಟ್ ಆಗಲಿವೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (M Chinnaswamy Stadium) ಒಟ್ಟು 4 ಪಂದ್ಯಗಳನ್ನ ನಡೆಸಲು ನಿರ್ಧರಿಸಲಾಗಿತ್ತು.
ಲೀಗ್ ಹಂತದಲ್ಲಿ ಮೂರು ಪಂದ್ಯಗಳು ಹಾಗೂ ಒಂದು ಸೆಮಿ ಫೈನಲ್ (Semi Final) ಪಂದ್ಯ ನಡೆಯಬೇಕಿತ್ತು. ಸೆಪ್ಟೆಂಬರ್ 30, ಅಕ್ಟೋಬರ್ 3, 26 ಹಾಗೂ 30 ರಂದು ಪಂದ್ಯಗಳು ಆಯೋಜನೆಗೊಂಡಿದ್ದವು.
ಯಾಕೆ ಅನುಮತಿ ಸಿಕ್ಕಿಲ್ಲ..?
ರಾಜ್ಯ ಸರ್ಕಾರ (State Govt) ಅನುಮತಿ ನೀಡಲು ನಿರಾಕರಿಸಿರೋದು ಆರ್ಸಿಬಿ ಕಾಲ್ತುಳಿತ (RCB Stampede) ಪ್ರಕರಣ. ಈ ವರ್ಷ ಆರ್ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿತ್ತು.
ಟ್ರೋಫಿ ಗೆದ್ದ ಖುಷಿಯಲ್ಲಿ ಆರ್ಸಿಬಿ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭಿಮಾನಿಗಳ ಜೊತೆ ಸಂಭ್ರಮಾಚರಣೆ ಇಟ್ಕೊಂಡಿತ್ತು. ಈ ವೇಳೆ ನೂಕು-ನುಗ್ಗಲು ಸಂಭವಿಸಿ ಭೀಕರ ಕಾಲ್ತುಳಿತ ಸಂಭವಿಸಿತ್ತು.
ಜೂನ್ 4 ರಂದು ನಡೆದ ಘೋರ ದುರಂತದಲ್ಲಿ ಒಟ್ಟು 11 ಆರ್ಸಿಬಿ ಅಭಿಮಾನಿಗಳು ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಈ ಪ್ರಕರಣವು ತನಿಖಾ ಹಂತದಲ್ಲಿದೆ. ಅಲ್ಲದೇ ಸರ್ಕಾರ, ಇಂಥ ದುರ್ಘಟನೆಗೆ ಆರ್ಸಿಬಿ ನೇರ ಹೊಣೆ ಎಂದು ಆರೋಪಿಸಿದೆ.
ಈ ಹಿನ್ನೆಲೆಯಲ್ಲಿ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಗಳನ್ನ ನಡೆಸಲು ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದೆ. ಮಹಿಳಾ ಏಕದಿನ ವಿಶ್ವಕಪ್ ಪಂದ್ಯಾವಳಿಯು ಸೆಪ್ಟೆಂಬರ್ 30 ರಿಂದ ಆರಂಭವಾಗಲಿದೆ.
ವಿಶ್ವಕಪ್ ಉದ್ಘಾಟನೆಯು ಬೆಂಗಳೂರಿನಲ್ಲಿ ನಡೆಯಬೇಕಿತ್ತು.