ವೇದಾ ಕೃಷ್ಣಮೂರ್ತಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ! ಭಾರತದ ಅನುಭವಿ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ.
2011ರಲ್ಲಿ ಪಾದಾರ್ಪಣೆ ಮಾಡಿದ ವೇದಾ, 48 ಏಕದಿನ ಮತ್ತು 76 ಟಿ20 ಪಂದ್ಯಗಳನ್ನಾಡಿದ್ದಾರೆ. ಭಾವನಾತ್ಮಕ ಪೋಸ್ಟ್ ಮೂಲಕ ನಿವೃತ್ತಿ ಘೋಷಿಸಿದ ವೇದಾ.
ಭಾರತದ ಅನುಭವಿ ಮಹಿಳಾ ಕ್ರಿಕೆಟರ್, ಕನ್ನಡತಿ ವೇದಾ ಕೃಷ್ಣಮೂರ್ತಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
2011ರಲ್ಲಿ ಕೇವಲ 18ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಕಡೂರು ಮೂಲದ ವೇದಾ ಕೃಷ್ಣಮೂರ್ತಿ ಇದೀಗ ಸ್ಮರ್ಧಾತ್ಮಕ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ.
ಸಣ್ಣ ಹಳ್ಳಿಯಿಂದ ಬಂದ ಆಟಗಾರ್ತಿ, ಇಡೀ ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ವೇದಾ ಇದೀಗ ಭಾವನಾತ್ಮಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.
ಚಿಕ್ಕಮಗಳೂರಿನ ಸಣ್ಣ ನಗರ ಕಡೂರಿನಿಂದ ಬಂದ ವೇದಾ ಕೃಷ್ಣಮೂರ್ತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಹೆಜ್ಜೆಗುರುತುಗಳನ್ನು ದಾಖಲಿಸುವ ಮೂಲಕ ಹಲವು ಸಣ್ಣ ನಗರದ ಯುವತಿಯರಿಗೆ ಸ್ಪೂರ್ತಿಯಾಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.
ಇಂಗ್ಲೆಂಡ್ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ವೇದಾ ಕೃಷ್ಣಮೂರ್ತಿ, ಭಾರತ ಪರ 48 ಏಕದಿನ ಹಾಗೂ 76 ಟಿ20 ಪಂದ್ಯಗಳನ್ನಾಡಿ ಕ್ರಮವಾಗಿ 829 ಹಾಗೂ 875 ರನ್ ಬಾರಿಸಿದ್ದಾರೆ.
ಇದೀಗ ವೇದಾ ಕೃಷ್ಣಮೂರ್ತಿ ತಮ್ಮ ವಿದಾಯ ಪೋಸ್ಟ್ನಲ್ಲಿ, ‘ದೊಡ್ಡ ಕನಸುಗಳನ್ನು ಹೊಂದಿರುವ ಸಣ್ಣ ಪಟ್ಟಣದ ಹುಡುಗಿ. ಕಡೂರಿನ ಶಾಂತ ಹಾದಿಗಳಿಂದ ಹಿಡಿದು ಹೆಮ್ಮೆಯಿಂದ ಭಾರತದ ಜೆರ್ಸಿಯನ್ನು ಧರಿಸುವವರೆಗೆ.
ಈ ಆಟ ನನಗೆ ಸಂತೋಷ, ನೋವು, ಉದ್ದೇಶ ಮತ್ತು ಕುಟುಂಬ ಎಲ್ಲವನ್ನೂ ನೀಡಿತು. ಇಂದು, ನಾನು ಆಟಕ್ಕೆ ವಿದಾಯ ಹೇಳುತ್ತೇನೆ, ಆದರೆ ಕ್ರಿಕೆಟ್ಗೆ ಅಲ್ಲ.
ನನ್ನ ಕುಟುಂಬ, ತಂಡದ ಸದಸ್ಯರು, ತರಬೇತುದಾರರು, ಸ್ನೇಹಿತರು ಮತ್ತು ತೆರೆಮರೆಯಲ್ಲಿದ್ದು ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಅಭಿಮಾನಿಗಳು ನಿಮ್ಮ ಪ್ರೀತಿಗೆ ಆಭಾರಿ ಎಂದು ಕೃತಜ್ಞತೆ ಅರ್ಪಿಸಿದ್ದಾರೆ.