
ವಿಜಯಪುರ: 18 ವರ್ಷದ ಯುವಕ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಶಿವಣಗಿ ಗ್ರಾಮದಲ್ಲಿ ಘಟನೆ ನಡೆದಿದೆ.
ದ್ವೀತಿಯ ಪಿಯುಸಿ ವಿದ್ಯಾರ್ಥಿಯಾಗಿದ್ದ ಸಿದ್ದಾರ್ಥ್ ಬಸವರಾಜ ಬಡಿಗೇರ (18) ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಸಿದ್ದಾರ್ಥ್ ಮಧ್ಯಾಹ್ನ ಮನೆಯಲ್ಲಿ ಮಲಗಿದ್ದಾಗ ಹೃದಯಾಘಾತ ಸಂಭವಿಸಿದೆ.
ಮನೆಯವರು ಸಂತೆಗೆಂದು ಹೊರಗೆ ಹೋಗಿದ್ದ ವೇಳೆ ಸಿದ್ದಾರ್ಥ್ಗೆ ಹೃದಯಾಘಾತ ಉಂಟಾಗಿದೆ. ಸಂತೆಯಿಂದ ಬಂದ ಬಳಿಕ ತಾಯಿ ಚಹಾ ಕುಡಿಯಲು ಮಗನನ್ನು ಎಬ್ಬಿಸಿದಾಗ ಆತ ಮೇಲೇಳಲೇ ಇಲ್ಲ.
ಇದರಿಂದ ಗಾಬರಿಗೊಂಡ ಪೋಷಕರು ಕೂಡಲೇ ಸ್ಥಳೀಯ ವೈದ್ಯರನ್ನು ಕರೆಯಿಸಿ ತಪಾಸಣೆ ಮಾಡಿಸಿದಾಗ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಸಿದ್ದಾರ್ಥ್, ಇಡೀ ದಿನ ತಂದೆಯ ಜೊತೆ ಬಡಿಗತನ ಕೆಲಸಕ್ಕೆ ಸಹಾಯ ಮಾಡಿದ್ದ ಎನ್ನಲಾಗಿದೆ. ಕೆಲಸದಿಂದ ದಣಿದಿದ್ದ ಸಿದ್ದಾರ್ಥ್, ಮಧ್ಯಾಹ್ನ ವಿಶ್ರಾಂತಿಗಾಗಿ ಮಲಗಿದ್ದಾಗ ಹೃದಯಾಘಾತ ಸಂಭವಿಸಿದೆ.