ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರ ತಂಡದ ಕುರಿತಾದ ಕಮಿಟ್ಮೆಂಟ್ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನ ಮೊದಲ ದಿನದಾಟದಲ್ಲಿ ರಿಷಭ್ ಪಂತ್ ಬ್ಯಾಟಿಂಗ್ ಮಾಡುವ ವೇಳೆ ಕಾಲ್ಬೆರಳಿನ ಗಾಯಕ್ಕೆ ತುತ್ತಾಗಿ ರಿಟೈರ್ ಹರ್ಟ್ ಆಗಿ ಮೈದಾನ ತೊರೆದಿದ್ದರು.
ಆದರೆ ಎರಡನೇ ದಿನದಾಟದಲ್ಲಿ ಕಾಲ್ಬೆರಳಿನ ನೋವಿದ್ದರೂ ಕುಂಟುತ್ತಲೇ ಮೈದಾನಕ್ಕಿಳಿಯುವ ಮೂಲಕ ಗಮನ ಸೆಳೆದಿದ್ದಾರೆ.
ದೇಶವನ್ನು ಪ್ರತಿನಿಧಿಸುವ ಪಂತ್ ಅವರ ಕಮಿಟ್ಮೆಂಟ್ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು ಎದ್ದುನಿಂತು ಜೋರಾಗಿ ಕರತಾಡನ ಮಾಡುವ ಮೂಲಕ ಹುರಿದುಂಬಿಸಿದ್ದಾರೆ.
ಇಂಗ್ಲೆಂಡ್ ಎದುರಿನ ಸರಣಿಯಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ರಿಷಭ್ ಪಂತ್, ಮೊದಲ ದಿನದಾಟದಲ್ಲಿ 37 ರನ್ ಬಾರಿಸಿ ಅರ್ಧಶತಕದತ್ತ ದಾಪುಗಾಲಿಡುತ್ತಿದ್ದರು.
ಈ ವೇಳೆ ಕ್ರೀಸ್ ವೋಕ್ಸ್ ಬೌಲಿಂಗ್ನಲ್ಲಿ ರಿವರ್ಸ್ ಸ್ವೀಪ್ ಮಾಡುವ ಯತ್ನದಲ್ಲಿ ಚೆಂಡು ಪಂತ್ ಅವರ ಬಲಗಾಲಿನ ಬೂಟ್ಗೆ ನೇರವಾಗಿ ಅಪ್ಪಳಿಸಿತ್ತು.
ಚೆಂಡು ಕಾಲಿನ ಬೆರಳಿಗೆ ಅಪ್ಪಳಿಸಿದ ವೇಗಕ್ಕೆ ಪಂತ್ ಕಾಲಿನಿಂದ ರಕ್ತ ಜಿನುಗಲಾರಂಭಿಸಿತು. ಸರಿಯಾಗಿ ನಿಲ್ಲಲು ಆಗದ ಪಂತ್ ಅವರನ್ನು ಸ್ಟೇಡಿಯಂನಿಂದಲೇ ಕಾರ್ಟ್ನಲ್ಲಿ ಕೂರಿಸಿಕೊಂಡು ಪೆವಿಲಿಯನ್ಗೆ ಕರೆದೊಯ್ಯಲಾಯಿತು.
ಇನ್ನು ಇದಾದ ಬಳಿಕ ಬಿಸಿಸಿಐ ಪಂತ್ ಗಾಯದ ಕುರಿತಂತೆ ಮೊದಲ ಅಪ್ಡೇಟ್ ನೀಡಿತ್ತು. ಅದರಲ್ಲಿ ಪಂತ್ ಅವರನ್ನು ಸ್ಕ್ಯಾನ್ಗೆ ಕರೆದೊಯ್ಯಲಾಗಿದೆ.
ಬಿಸಿಸಿಐ ವೈದ್ಯಕೀಯ ಸಿಬ್ಬಂದಿಯು ಅವರ ಆರೋಗ್ಯದ ಮೇಲೆ ನಿಗಾಯಿಟ್ಟಿದ್ದಾರೆ ಎಂದು ತಿಳಿಸಿತ್ತು. ಇದಾದ ಬಳಿಕ ಇಂದು ಹಲವು ಮಾಧ್ಯಮಗಳು ರಿಷಭ್ ಪಂತ್ ಕಾಲ್ಬೆರಳಿಗೆ ಗಂಭೀರವಾದ ಗಾಯವಾಗಿದ್ದು, ಮುಂದಿನ ಆರು ವಾರಗಳ ಕಾಲ ಕ್ರಿಕೆಟ್ನಿಂದ ಪಂತ್ ಹೊರಗುಳಿಯಲಿದ್ದಾರೆ ಎಂದು ವರದಿಗಳಾಗಿದ್ದವು. ಇದು ಟೀಂ ಇಂಡಿಯಾ ಪಾಲಿಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಎಂದೇ ಬಿಂಬಿಸಲಾಗಿತ್ತು.