
ಸಿಲಿಯಾ (ಬ್ರೆಜಿಲ್): ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಖ್ಯಾತಿ ನಿರಂತರವಾಗಿ ಹೆಚ್ಚುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರ ರಾಜತಾಂತ್ರಿಕ ಕೌಶಲ್ಯಗಳು ದೇಶವನ್ನು ಮತ್ತಷ್ಟು ಹೊಸ ಎತ್ತರಕ್ಕೆ ಕೊಂಡೊಯ್ದಿವೆ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಗುತ್ತಿರುವ ಮನ್ನಣೆಯೆ ಸಾಕ್ಷಿಯಾಗಿದೆ. ಅದರಂತೆ, ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬ್ರೆಜಿಲ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್ ಅನ್ನು ಪ್ರದಾನ ಮಾಡಲಾಗಿದೆ.
ಎಂಟು ದಿನಗಳ ಐದು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಮಹತ್ವದ ಬ್ರಿಕ್ಸ್ ಸಭೆಗಾಗಿ ಬ್ರೆಜಿಲ್ ಪ್ರವಾಸದಲ್ಲಿದ್ದಾರೆ. ಈ ವೇಳೆ, ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರು, ಎರಡು ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಮತ್ತು ಪ್ರಮುಖ ಜಾಗತಿಕ ವೇದಿಕೆಗಳಲ್ಲಿ ಭಾರತ-ಬ್ರೆಜಿಲ್ ಸಹಕಾರವನ್ನು ಹೆಚ್ಚಿಸಲು ನೀಡಿದ ಗಮನಾರ್ಹ ಕೊಡುಗೆಗಳನ್ನು ಗುರುತಿಸಿ, ಬ್ರೆಜಿಲ್ ಸರ್ಕಾರ ಈ ಗೌರವವನ್ನು ಪ್ರದಾನ ಮಾಡಿದೆ. ಇನ್ನು, 2014 ರ ಮೇ ತಿಂಗಳಲ್ಲಿ ಪ್ರಧಾನಿ ಮೋದಿ ಅಧಿಕಾರ ವಹಿಸಿಕೊಂಡ ನಂತರ ವಿದೇಶಿ ಸರ್ಕಾರವೊಂದು ಅವರಿಗೆ ನೀಡುತ್ತಿರುವ 26 ನೇ ಅಂತರರಾಷ್ಟ್ರೀಯ ಗೌರವ ಇದಾಗಿದೆ.