ಮಂಗಳೂರು ಡ್ರಾಗನ್ಸ್ಗೆ ಚೊಚ್ಚಲ ಮಹಾರಾಜ ಕಿರೀಟ! ಕರ್ನಾಟಕದ ಪ್ರತಿಷ್ಠಿತ 2025ರ ಮಹಾರಾಜ ಟಿ20 ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮಂಗಳೂರು ಡ್ರಾಗನ್ಸ್ ತಂಡ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಗೆದ್ದು ಚೊಚ್ಚಲ ಟ್ರೋಫಿ ತನ್ನದಾಗಿಸಿಕೊಂಡಿದೆ.
ಗುರುವಾರ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮಂಗಳೂರು ಡ್ರಾಗನ್ಸ್ ತಂಡವು ವಿ ಜಯದೇವನ್ ನಿಯಮದಡಿಯಲ್ಲಿ (VJD Method) 8 ವಿಕೆಟ್ಗಳಿಂದ ಮಣಿಸಿ ಮೊದಲ ಬಾರಿಗೆ ಮಹಾರಾಜ ಟ್ರೋಫಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಹುಬ್ಬಳ್ಳಿ ಟೈಗರ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ದೇವದತ್ ಪಡಿಕ್ಕಲ್ ನಾಯಕತ್ವದ ತಂಡ 20 ಓವರ್ಗಳಲ್ಲಿ 8 ವಿಕೆಟ್ಗೆ 154 ರನ್ಗಳನ್ನು ಕಲೆಹಾಕಿತು.
ಕೃಷ್ಣನ್ ಶ್ರೀಜಿತ್ 45 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 52 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಮೊಹಮ್ಮದ್ ತಹಾ 15 ಎಸೆತಗಳಲ್ಲಿ 27 ರನ್, ರಿತೇಶ್ ಬಟ್ಕಳ್ 13, ಅಭಿನವ್ ಮನೋಹರ್ 17, ಮನ್ವಂತ್ ಕುಮಾರ್ 15, ಕೆಸಿ ಕಾರಿಯಪ್ಪ 5 ರನ್ಗಳಿಸಿದರು.
ಮಂಗಳೂರು ಡ್ರಾಗನ್ಸ್ನ ಬೌಲರ್ಗಳಲ್ಲಿ ಸಚಿನ್ ಶಿಂದೆ 28ಕ್ಕೆ3, ಶ್ರೀವತ್ಸಾ ಆಚಾರ್ಯ 30ಕ್ಕೆ2, ಮೆಕ್ನಿಲ್ ಹ್ಯಾಡ್ಲಿ ನೊರೊನ್ಹಾ 25ಕ್ಕೆ 2 ವಿಕೆಟ್ ಪಡೆದು ಬಲಿಷ್ಠ ಹುಬ್ಬಳ್ಳಿ ತಂಡವನ್ನ ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದರು.
155 ರನ್ಗಳ ಈ ಗುರಿ ಬೆನ್ನಟ್ಟಿದ ಮಂಗಳೂರು ತಂಡ 10.4 ಓವರ್ಗಳ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 85 ರನ್ ಕಲೆಹಾಕಿತ್ತು.
ಆದರೆ ಈ ವೇಳೆಗೆ ಮಳೆ ಧಾರಕಾರವಾಗಿ ಸುರಿಯಲಾರಂಭಿಸಿತು. ಹೀಗಾಗಿ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಸಂಪೂರ್ಣ ಪಂದ್ಯ ಮುಗಿಸಲು ಮಳೆ ಅವಕಾಶ ಕೊಡದ ಕಾರಣ.
ವಿಜೆಡಿ ನಿಯಮದಡಿಯಲ್ಲಿ ಮಂಗಳೂರು ತಂಡವನ್ನು ವಿಜಯ ಎಂದು ಘೋಷಿಸಲಾಯಿತು.
ಮಂಗಳೂರು ಪರ ಶರತ್ ಬಿಆರ್ 35 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ಸ್ಗಳ ನೆರವಿನಿಂದ 49ರನ್ಗಳಿಸಿದರೆ, ಲೋಚನ್ ಗೌಡ 17 ಎಸೆತಗಳಲ್ಲಿ 18ರನ್ಗಳಿಸಿದರು.
ಪಲ್ಲವಕುಮಾರ್ 8 ಎಸೆತಗಳಲ್ಲಿ ಅಜೇಯ 7, ಅನೀಶ್ ಕೆವಿ ಅಜೇಯ 5 ರನ್ಗಳಿಸಿದರು.
ಸೇಡು ತೀರಿಸಿಕೊಂಡ ಮಂಗಳೂರು
ಫೈನಲ್ ಪಂದ್ಯವನ್ನ ಗೆಲ್ಲುವ ಮೂಲಕ ಡ್ರಾಗನ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ನಡುವೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ 210ರನ್ಗಳಿಸಿತ್ತು.
ಇದಕ್ಕೆ ಉತ್ತರವಾಗಿ ಮಂಗಳೂರು ತಂಡ ಕೇವಲ 100ಕ್ಕೆ ಆಲೌಟ್ ಆಗಿ 110 ರನ್ಗಳ ಹೀನಾಯ ಸೋಲು ಕಂಡಿತ್ತು. ಆದರೆ ಕ್ವಾಲಿಫೈಯರ್ 2ರಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಮಂಗಳೂರು ಡ್ರಾಗನ್ಸ್ 7 ವಿಕೆಟ್ಗಳಿಂದ ಗೆದ್ದು ಫೈನಲ್ ಪ್ರವೇಶಿಸಿತ್ತು.
ಫೈನಲ್ ಪಂದ್ಯಕ್ಕೂ ಮುನ್ನ ಹುಬ್ಬಳ್ಳಿ ಈ ಪಂದ್ಯವನ್ನು ಸುಲಭವಾಗಿ ಗೆಲುವು ಸಾಧಿಸಬಹುದು ಎಂದೇ ನಿರೀಕ್ಷಿಲಾಗಿತ್ತು.
ಅಂತೆ ಮೊದಲೆರಡು ಓವರ್ಗಳಲ್ಲಿ 30 ರನ್ಗಳಿಸುವ ಮೂಲಕ ಹುಬ್ಬಳ್ಳಿ ಉತ್ತಮ ಆರಂಭ ಪಡೆಯಿತಾದರೂ ದಿಢೀರ್ ಕುಸಿತ ಕಂಡು 154ರನ್ಗಳ ಸಾಧಾರಣ ಮೊತ್ತಕ್ಕೆ ನಿಯಂತ್ರಣಗೊಂಡಿತ್ತು.