ಬೆಂಗಳೂರಲ್ಲಿ ಕಸ ಕೊಟ್ಟು ಕೆಲಸಕ್ಕೆ ಹೋಗಿ..ಸಮಯ ಬದಲಾಗಿದೆ! ಬೆಂಗಳೂರಲ್ಲಿ ಬೆಳ್ ಬೆಳಗ್ಗೆ ಕೋಳಿ ಕೂಗುತ್ತೋ ಇಲ್ವೋ? ಬನ್ನಿ ಬನ್ನಿ.. ಎಲ್ಲರೂ ಬನ್ನಿ ಅನ್ನೋ ಸಾಂಗ್ ಕೇಳುತ್ತೆ… ಇದು ಹಲವರಿಗೆ ಇರಿಟೇಶನ್.. ಇನ್ ಕೆಲವ್ರಿಗೆ ಬೆಳಗಾಯ್ತು ಅನ್ನೋ ನೋಟಿಫಿಕೇಶನ್.. ಮತ್ತೆ ಕೆಲವರಿಗೆ ಕಸ ಬಿಸಾಡೋ ಅಲರಾಂ ಟೈಮ್.. ಈ ನೋಟಿಫಿಕೇಶನ್ ಸಮಯ ಈಗ ಬದಲಾಗಿದೆ.
ಮನೆ ಮನೆಗಳಿಂದ ಕಸ ಸಂಗ್ರಹ ಮಾಡುವ ಕಸದ ಆಟೋಗಳು ಇನ್ಮುಂದೆ ಮೊದಲಿಗಿಂತ ಬೇಗ ಮನೆಗಳ ಬಳಿ ಬರಲಿದೆ. ಇಷ್ಟು ದಿನ ಬೆಳಗ್ಗೆ 6 ಗಂಟೆಯಿಂದ 7.30ರವರೆಗೂ ಏರಿಯಾ ರೌಂಡ್ ಹೊಡಿಯುತ್ತಿತ್ತು. ಆದ್ರೆ ಇನ್ಮೇಲೆ ಬೆಳಗ್ಗೆ 5.30ವರೆಯಿಂದ 6.30ರವರೆಗೂ ಕಸ ಸಂಗ್ರಹಣೆ ಮಾಡಲಿದೆ. ಹಾಗಿದ್ರೆ ಈ ದಿಢೀರ್ ಬದಲಾವಣೆಗೆ ಕಾರಣ ಏನು ಅನ್ನೋ ವಿವರ ಇಲ್ಲಿದೆ.
‘ಕಸ ಕೊಟ್ಟು ಹೋಗಿ’
ಕಸ ಸಂಗ್ರಹ ಆಟೋ ಲೇಟ್ ಆಗಿ ಬರುವುದರಿಂದ ಮುಂಜಾನೆ ಕೆಲಸಕ್ಕೆ ಹೋಗೋರು ಕಸ ವಿಲೇವಾರಿ ಮಾಡದೇ ಹೋಗ್ತಾರೆ. ಹೀಗೆ, ವಿಲೇವಾರಿ ಮಾಡದ ಕಸವನ್ನ ರಸ್ತೆಗಳ ಪಕ್ಕ, ಅಥವಾ ಕಸದ ರಾಶಿಗಳಿರುವ ಕಡೆ ಹಾಕಿ ಹೋಗ್ತಾರೆ. ಹಾಗಾಗಿ, ಮುಂಜಾನೆ ಕೆಲಸಕ್ಕೆ ಹೋಗೋರು, ತಾವು ಕೆಲಸಕ್ಕೆ ಹೋಗೋ ಮುಂಚೆ ಕಸ ಕೊಟ್ಟು ಹೋಗ್ಲಿ ಅನ್ನೋದು ಬದಲಾವಣೆಗೆ ಕಾರಣವಂತೆ.
ಬೆಂಗಳೂರು ಸ್ವಚ್ಚವಾಗಿರಬೇಕು, ಕಸ ಮುಕ್ತ ನಗರ ಮಾಡ್ಬೇಕು ಅನ್ನೋದಷ್ಟೇ ಇದರ ಉದ್ದೇಶವಾಗಿದ್ದು, ಇದರಿಂದಾದರೂ ರಸ್ತೆ ರಸ್ತೆಯಲ್ಲಿ ಕಸ ಸುರಿಯೋದಕ್ಕೆ ಕಡಿವಾಣ ಬೀಳುತ್ತೋ ಕಾದುನೋಡೋಣ.