ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ಮತ್ತೆ ವಜಾ. ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ (JDS) ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ಮತ್ತೆ ವಜಾಗೊಳಿಸಿದೆ.
ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹಾಸನ ಜಿಲ್ಲೆಯ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ (Rape Case) ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಬಾರಿ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.
ಈ ಪ್ರಕರಣದ ಸ್ವರೂಪ ಗಂಭೀರ ಆಗುತ್ತಿದ್ದಂತೆ ವಿದೇಶದಿಂದ ಮರಳಿ ಬಂದ ಪ್ರಜ್ವಲ್ ರೇವಣ್ಣನನ್ನು ಪೊಲೀಸರು ವಶಕ್ಕೆ ಪಡೆದು ಜೈಲಿಗಟ್ಟಿದ್ದರು. ಇನ್ನು ಹಲವು ಬಾರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿದ್ದುಮ ಪೊಲೀಸರು ಚಾರ್ಜ್ ಶೀಟ್ ಕೂಡ ಸಲ್ಲಿಕೆ ಮಾಡಿದ್ದಾರೆ. ಆದರೆ, ಸಂತ್ರಸ್ತ ಮಹಿಳೆಯನ್ನು ಅವರ ಮನೆಯವರು ಕಿಡ್ನಾಪ್ ಮಾಡಿದ ಆರೋಪವೂ ಇದೆ. ಈ ಹಿನ್ನೆಲೆಯಲ್ಲಿ ಆರೋಪಿ ಪ್ರಜ್ವಲ್ ರೇವಣ್ಣ ಪ್ರಭಾವಿ ಆಗಿದ್ದು, ಸಂತ್ರಸ್ತ ಮಹಿಳೆ ಮೇಲೆ ತಮ್ಮ ಪ್ರಭಾವ ಬೀರಬಹುದು ಎಂಬ ಕಾರಣದಿಂದ ಜಾಮೀನು ನಿರಾಕರಿಸುತ್ತಲೇ ಬಂದಿದೆ.
ಇದೀಗ ಜನಪ್ರತಿನಿಧಿ ನ್ಯಾಯಾಲಯದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ನೀಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಮಾಡಿದ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರ ಪೀಠವು ಜಾಮೀನು ಅರ್ಜಿಯನ್ನು ವಜಾ ಆದೇಶ ಹೊರಡಿಸಿದೆ.