ನಮ್ಮ ಮೆಟ್ರೋ ಹಳದಿ ಮಾರ್ಗ: ಆ.10ರಂದು ಮೋದಿ ಉದ್ಘಾಟನೆ! ಬಹು ನಿರೀಕ್ಷಿತ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು
ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 10ರಂದು ಮೆಟ್ರೋ ಹಳದಿ ಮಾರ್ಗ ಉದ್ಘಾಟಿಸಲಿದ್ದಾರೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಭಾನುವಾರ ಘೋಷಿಸಿದ್ದಾರೆ.
‘X’ ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 10 ರಂದು ಮೆಟ್ರೋ ಹಳದಿ ಮಾರ್ಗವನ್ನು ಉದ್ಘಾಟಿಸಲಿದ್ದಾರೆ.
ಬೆಂಗಳೂರಿನ ಎಲ್ಲ ಜನರ ಪರವಾಗಿ, ನಮ್ಮ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಯಾವಾಗಲೂ ಆದ್ಯತೆ ನೀಡಿದ್ದಕ್ಕಾಗಿ ನಾನು ಪ್ರಧಾನಿಗೆ ಧನ್ಯವಾದ ಹೇಳುತ್ತೇನೆ’ ಎಂದಿದ್ದಾರೆ.
ಮೆಟ್ರೋ ಹಳದಿ ಮಾರ್ಗದಿಂದಾಗಿ ಸುಮಾರು ಎಂಟು ಲಕ್ಷ ಪ್ರಯಾಣಿಕರಿಗೆ ಪ್ರಯೋಜನವಾಗಲಿದ್ದು, ಸಿಲ್ಕ್ ಬೋರ್ಡ್ ಜಂಕ್ಷನ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ.
ಬೆಂಗಳೂರಿನ ಸಂಚಾರ ಸಮಸ್ಯೆಗಳಿಗೆ ಸಾರ್ವಜನಿಕ ಸಾರಿಗೆ ಮಾತ್ರ ದೀರ್ಘಕಾಲೀನ ಪರಿಹಾರವಾಗಿದ್ದು, ಈ ಮಾರ್ಗವನ್ನು ಯಾವುದೇ ವಿಳಂಬವಿಲ್ಲದೆ ಸಾರ್ವಜನಿಕರಿಗೆ ಮುಕ್ತವಾಗಿಸಲು ಮೋದಿಯವರ ವೈಯಕ್ತಿಕ ಪ್ರಯತ್ನವೇ ಸಕಾಲಿಕ ಉದ್ಘಾಟನೆಗೆ ಕಾರಣ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಮೆಟ್ರೋ ಹಳದಿ ಮಾರ್ಗ ಸಂಚಾರಕ್ಕೆ ಆಗಸ್ಟ್ 15 ರ ಗಡುವು ನೀಡಲಾಗಿತ್ತು. ಆದರೆ, ಆಗಸ್ಟ್ 10 ರಂದು ಉದ್ಘಾಟನೆ ನಡೆದರೆ, ಈ ಯೋಜನೆಯು ಗಡುವಿಗಿಂತಲೂ ಮೊದಲೇ ಪೂರ್ಣಗೊಂಡಿದೆ.
