ಧರ್ಮಸ್ಥಳದಲ್ಲಿ ವೀರೇಂದ್ರ ಹೆಗ್ಗಡೆ ಭೇಟಿಯಾದ ಅಶೋಕ್! ಮಂಗಳೂರು: ಧರ್ಮಸ್ಥಳ ಕುರಿತು ಅಪಪ್ರಚಾರ ಖಂಡಿಸಿ ಸೋಮವಾರ ಬಿಜೆಪಿ ಧರ್ಮಸ್ಥಳದಲ್ಲಿ ಬೃಹತ್ ಸಮಾವೇಶ ನಡೆಸುತ್ತಿದೆ.
ಈ ನಡುವೆಯೇ ವಿಪಕ್ಷ ನಾಯಕ ಆರ್ ಅಶೋಕ್ (R Ashok), ಧರ್ಮಸ್ಥಳ (Dharmasthala) ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು (Veerendra Heggade) ಭೇಟಿಯಾಗಿದ್ದಾರೆ.
ಧರ್ಮಸ್ಥಳದ ಬುರುಡೆ ರಹಸ್ಯದ ತನಿಖೆ ಮಹತ್ವದ ಘಟ್ಟಕ್ಕೆ ಬಂದು ತಲುಪಿದೆ. ಈ ನಡುವೆ ಬಿಜೆಪಿ ಧರ್ಮಸ್ಥಳದಲ್ಲಿ ಲಕ್ಷ ಜನ ಸೇರಿಸಿ ಸಮಾವೇಶಕ್ಕೆ ಸಿದ್ಧತೆ ನಡೆಸಿದೆ.
ಎಸ್ಐಟಿ ತನಿಖೆ ಷಡ್ಯಂತ್ರದಿಂದ ಕೂಡಿದೆ ಎಂದು ಆರೋಪಿಸುತ್ತಿರುವ ಬಿಜೆಪಿ, ಎನ್ಐಎ ತನಿಖೆಗೆ ಒತ್ತಾಯಿಸಲಿದೆ. ಧರ್ಮಸ್ಥಳ ಕ್ಷೇತ್ರದಲ್ಲಿ ನಿಂತು ಬಿಜೆಪಿ ಬಹಿರಂಗ ರಣಕಹಳೆ ಮೊಳಗಿಸಲಿದೆ.
ಧರ್ಮಸ್ಥಳದ ಬುರುಡೆ ರಹಸ್ಯವನ್ನ ಎಸ್ಐಟಿ ಭೇದಿಸಲು ಶುರು ಮಾಡಿ ಒಂದೂವರೆ ತಿಂಗಳಾಗುತ್ತಿದೆ. ಆರಂಭದಲ್ಲಿ ಸೈಲೆಂಟ್ ಆಗಿದ್ದ ಬಿಜೆಪಿ, ಇದೆಲ್ಲ ಬುರುಡೆ ಕಥೆ ಎಂದು ಹತ್ತು ದಿನದಲ್ಲಿ ನಿರ್ಧರಿಸಿತು.
ಬಿಜೆಪಿ ನಾಯಕ ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿಧಾನಸೌಧದಲ್ಲಿ ಇದೊಂದು ಷಡ್ಯಂತ್ರ ಎಂಬ ಶಂಖನಾದವನ್ನು ಮೊಳಗಿಸಿದ್ದರು.
ಅಲ್ಲಿಂದ ಇವತ್ತಿನ ತನಕ ಬಿಜೆಪಿ ಧರ್ಮಸ್ಥಳ ಪ್ರಕರಣವನ್ನು ರಾಜ್ಯ ಸರ್ಕಾರದ ವಿರುದ್ಧದ ಅಸ್ತ್ರವೆಂದು ಪರಿಗಣಿಸಿದೆ.
ಧರ್ಮಸ್ಥಳ ದೇವಸ್ಥಾನದ ವಠಾರದಲ್ಲಿ ಸೋಮವಾರ ಬಿಜೆಪಿ ಬೃಹತ್ ಸಮಾವೇಶ ನಡೆಸುತ್ತದೆ. ಒಂದು ಲಕ್ಷಕ್ಕಿಂತ ಹೆಚ್ಚು ಜನ ಕ್ಷೇತ್ರಕ್ಕೆ ಭಕ್ತರು ಭಾಗವಹಿಸಲಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಧರ್ಮ ಜಾಗರಣೆಯ ನೇತೃತ್ವ ವಹಿಸಿದ್ದಾರೆ. ಸಮಾವೇಶ ಮೂಲಕ ಎನ್ಐಎ ತನಿಖೆಗೆ ಒತ್ತಾಯಿಸಲಾಗುತ್ತದೆ.
ಷಡ್ಯಂತ್ರಕ್ಕೆ ಹಣದ ಹೊಳೆ ಹರಿದು ಬಂದ ಆರೋಪವಿದೆ. ಇ.ಡಿ ಈ ಬಗ್ಗೆ ಗಮನ ಹರಿಸಲು ಒತ್ತಾಯಿಸಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಈಗಾಗಲೇ ಭಕ್ತರು ಕ್ಷೇತ್ರಕ್ಕೆ ಬಂದಿದ್ದಾರೆ.
ದೇವರ ದರ್ಶನ ನಡೆಸಿ ಅನ್ನಪ್ರಸಾದ ಸ್ವೀಕರಿಸಿ ಸಮಾವೇಶದಲ್ಲಿ ಜನ ಭಾಗಿಯಾಗಲಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ.