
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಎ2 ಆರೋಪಿ ಆಗಿರುವ ನಟ ದರ್ಶನ್ ಅವರಿಗೆ ವಿದೇಶಕ್ಕೆ ತೆರಳಲು 57ನೇ ಸೆಷನ್ಸ್ ನ್ಯಾಯಾಲಯ ಅನುಮತಿ ನೀಡಿದೆ.
ಬಹು ನಿರೀಕ್ಷಿತ ಡೆವಿಲ್ ಸಿನಿಮಾದ ಶೂಟಿಂಗ್ ಹಿನ್ನೆಲೆಯಲ್ಲಿ ದರ್ಶನ್ ಪರ ವಕೀಲರು ಥೈಲ್ಯಾಂಡ್ಗೆ ತೆರಳಲು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ 57ನೇ ಸೆಷನ್ಸ್ ನ್ಯಾಯಾಲಯ ನಟ ದರ್ಶನ್ ಅವರಿಗೆ ಥೈಲ್ಯಾಂಡ್ಗೆ ತೆರಳಬಹುದು ಎಂದು ಹೇಳಿದೆ. ಅದು ಜುಲೈ11 ರಿಂದ 30 ರವರೆಗೆ ಮಾತ್ರ ವಿದೇಶಕ್ಕೆ ತೆರಳಲು ಕಾಲಾವಕಾಶ ನೀಡಲಾಗಿದೆ. ಈ ಸಮಯ ಮುಗಿದ ಮೇಲೆ ದರ್ಶನ್ ಅವರು ಮತ್ತೆ ವಾಪಸ್ ಆಗಿರಬೇಕು.
ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಡೆವಿಲ್ ಸಿನಿಮಾದ ಶೂಟಿಂಗ್ಗಾಗಿ ದರ್ಶನ್ಗೆ 20 ದಿನಗಳವರೆಗೆ ಅವಕಾಶ ನೀಡಲಾಗಿದೆ. ಜುಲೈ 11 ರಂದೇ ದರ್ಶನ್ ಅವರು ಥೈಲ್ಯಾಂಡ್ಗೆ ತೆರಳಬಹುದು. ಏಕೆಂದರೆ ಕೋರ್ಟ್ ನೀಡಿದ ಸಮಯದೊಳಗೆ ಸಿನಿಮಾ ಶೂಟಿಂಗ್ ಮಾಡಿಕೊಂಡು ಹಿಂತಿರಗಬೇಕಿದೆ. ಇನ್ನು ಕೇವಲ 3 ದಿನಗಳು ಬಾಕಿ ಇರುವುದರಿಂದ ಡೆವಿಲ್ ಚಿತ್ರತಂಡ ಹಾಗೂ ದರ್ಶನ್ ಅವರು ಥೈಲ್ಯಾಂಡ್ಗೆ ತೆರಳಲು ಪೂರ್ವ ಸಿದ್ಧತೆಯಲ್ಲಿರಬಹುದು.
ಇನ್ನು ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಪವಿತ್ರಾಗೌಡ ಎ1 ಆರೋಪಿ ಆಗಿದ್ರೆ ದರ್ಶನ್ ಎ2 ಆರೋಪಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಇನ್ನು ಕೆಲವರು ಇದ್ದು ಅವರು ರಾಜ್ಯದ ಬೇರೆ ಬೇರೆ ಜೈಲಿನಲ್ಲಿ ಇದ್ದಾರೆ. ಜಾಮೀನಿನ ಮೇಲೆ ದರ್ಶನ್, ಪವಿತ್ರಾಗೌಡ ಸೇರಿದಂತೆ 7 ಮಂದಿಗೆ ಹೈಕೋರ್ಟ್ ಜಾಮೀನು ಮಂಜೂರು ಈ ಹಿಂದೆಯೇ ಮಾಡಿತ್ತು. ಆದರೆ ದರ್ಶನ್ಗೆ ವಿದೇಶಕ್ಕೆ ತೆರಳಲು ಅನುಮತಿ ಇರಲಿಲ್ಲ. ಹಾಗಾಗಿ ಕೋರ್ಟ್ನಿಂದ ಅನುಮತಿ ಪಡೆದಿದ್ದು ಡೆವಿಲ್ ಸಿನಿಮಾ ಶೂಟಿಂಗ್ಗೆ ಎಂದು ದರ್ಶನ್ ಥೈಲ್ಯಾಂಡ್ಗೆ ಸದ್ಯದಲ್ಲೇ ಪ್ರವಾಸ ಬೆಳೆಸಲಿದ್ದಾರೆ.