ಗಣೇಶ ವಿಸರ್ಜನೆ ವೇಳೆ ಪಟಾಕಿ ಸ್ಫೋಟ–ಓರ್ವ ಬಾಲಕ ದುರ್ಮರಣ! ದೊಡ್ಡಬಳ್ಳಾಪುರ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಸಂಭವಿಸಿದ ಪಟಾಕಿ ಸ್ಫೋಟದಲ್ಲಿ (Firecracker Explosion) ಓರ್ವ ಬಾಲಕ ಸಾವನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿರುವ ಮುತ್ತೂರಿನಲ್ಲಿ ನಡೆದಿದೆ.
ಇಂದು ಸಂಜೆ ಗಣೇಶ ವಿಸರ್ಜನೆ ವೇಳೆ ಪಟಾಕಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ 15 ವರ್ಷದ ತನುಷ್ ರಾವ್ ಮೃತಪಟ್ಟಿದ್ದಾನೆ.
ಇನ್ನೂ ಘಟನೆಯಲ್ಲಿ ವಿದ್ಯಾರ್ಥಿಗಳಾದ (Students) ಗಣೇಶ್, ಯೋಗೇಶ್, ಪವರ್ ಲಿಫ್ಟರ್ ಚಾಲಕ ಮುನಿರಾಜು, ನಾಗರಾಜು, ಚೇತನ್ ಶಾವಿ ಎಂಬುವರಿಗೆ ಸುಟ್ಟ ಗಾಯಗಳಾಗಿವೆ.
ಇದೇ ವೇಳೆ ಬಂದೋಬಸ್ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ ಜಾಕಿರ್ ಹುಸೇನ್ ಎಂಬುವರ ಕೈಗೆ ಪಟಾಕಿ ಸಿಡಿದು ಗಂಭೀರ ಗಾಯವಾಗಿದೆ.

ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಅಂದಹಾಗೆ ಇಂದು ಸಂಜೆ 5.30ರ ವೇಳೆ ಫ್ರೆಂಡ್ಸ್ ವಿನಾಯಕ ಗ್ರೂಪ್ವತಿಯಿಂದ ಗಣೇಶ ವಿಸರ್ಜನೆಗೆಂದು ಟ್ರ್ಯಾಕ್ಟರ್ನಲ್ಲಿ ಮೆರವಣಿಗೆ ಬರುವ ವೇಳೆ, ಮೆರವಣಿಗೆ ಮಾಡಲು ಕರೆಸಲಾಗಿದ್ದ ಪವರ್ ಲಿಪ್ಟರ್ ವಾಹನ ಬಿಸಿಯಾಗಿ, ಅದರ ಮೇಲೆ ಇಡಲಾಗಿದ್ದ ಪಟಾಕಿಗಳ ಏಕಾಏಕಿ ಸ್ಪೋಟಗೊಂಡಿವೆ.
ಸ್ಥಳಕ್ಕೆ ಎಸ್ಪಿ ಸಿಕೆ ಬಾಬಾ, ಎಎಸ್ಪಿ ನಾಗರಾಜ್, ಡಿವೈಎಸ್ಪಿ ರವಿ ಸೇರಿದಂತೆ ಪೊಲೀಸ್ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಆಸ್ಪತ್ರೆಗೆ ದಾಖಲಾದವರೊಂದಿಗೆ ಮಾತುಕತೆ ನಡೆಸಿದ್ದಾರೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.