
ಕೇರಳದ (Kerala) ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಯೆಮನ್ನಲ್ಲಿ (Yemen) ಜು.16ಕ್ಕೆ ಜಾರಿಯಾಗಲಿದ್ದ ಮರಣದಂಡನೆಯನ್ನು ಮುಂದೂಡಲಾಗಿದೆ ಎಂದು ವರದಿಯಾಗಿದೆ.
ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಅವರ ಮಧ್ಯಪ್ರವೇಶದ ಬಳಿಕ ಈ ಬೆಳವಣಿಗೆ ನಡೆದಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ನಿಮಿಷಾ ಪ್ರಿಯಾ ಅವರಿಗೆ ಮರಣದಂಡನೆ ಜಾರಿಗೊಳಿಸಲು ಬುಧವಾರಕ್ಕೆ ದಿನಾಂಕ ನಿಗದಿಯಾಗಿತ್ತು. ಈ ನಡುವೆ ಅವರ ರಕ್ಷಣೆಗೆ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಅವರು ಯೆಮನ್ನ ಪ್ರಮುಖ ಸೂಫಿ ವಿದ್ವಾಂಸ ಶೇಖ್ ಹಬೀರ್ ಉಮರ್ ಬಿನ್ ಹಾಫಿಝ್ ಅವರ ಮೂಲಕ ನಡೆಸಿದ ಪ್ರಯತ್ನ ಫಲಪ್ರದವಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಶೇಖ್ ಹಬೀಬ್ ಅವರ ಪ್ರತಿನಿಧಿಗಳು ಮತ್ತು ಮೃತ ಯೆಮೆನ್ ಪ್ರಜೆ ತಲಾಲ್ ಅಬ್ದೋ ಮಹ್ದಿ ಅವರ ಕುಟುಂಬದ ನಡುವೆ ಮಂಗಳವಾರ ಧಮರ್ನಲ್ಲಿ ನಿರ್ಣಾಯಕ ಸಭೆ ನಡೆಯುವ ನಿರೀಕ್ಷೆಯಿದೆ. ಯೆಮನ್ನ ಹೊದೈದಾ ರಾಜ್ಯ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಮತ್ತು ಶೂರಾ ಕೌನ್ಸಿಲ್ ಸದಸ್ಯರಾಗಿ ಪ್ರಬಲ ಹುದ್ದೆಗಳನ್ನು ಹೊಂದಿರುವ ತಲಾಲ್ ಅವರ ಕುಟುಂಬದ ಸಂಬಂಧಿ ಮಾತುಕತೆಯಲ್ಲಿ ಭಾಗವಹಿಸಲು ಧಮರ್ಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.