ಟ್ರಂಪ್ ಜೊತೆ ಅಲಾಸ್ಕ ಸಭೆ ಬಳಿಕ ಮೋದಿಗೆ ಫೋನ್ ಮಾಡಿದ ಪುಟಿನ್! ಉಕ್ರೇನ್ ಮೇಲಿನ ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸುವ ಬಗ್ಗೆ ಚರ್ಚಿಸಲು ಅಲಾಸ್ಕದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಾದ ಬಳಿಕ, ಪ್ರಧಾನಿ ಮೋದಿಗೆ (PM Modi) ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಫೋನ್ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.
2022 ರ ಫೆಬ್ರವರಿಯಿಂದ ನಡೆಯುತ್ತಿರುವ ಯುದ್ಧದ ಬಗ್ಗೆ ಭಾರತದ ನಿಲುವನ್ನು ಪ್ರಧಾನಿ ಒತ್ತಿ ಹೇಳಿದರು. ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ಅವರು ಕರೆ ನೀಡಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.
ಈ ನಿಟ್ಟಿನಲ್ಲಿ ಭಾರತ ತನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಪುಟಿನ್ಗೆ ಮೋದಿ ತಿಳಿಸಿದ್ದಾರೆ.
ಮೋದಿ ಮತ್ತು ಪುಟಿನ್ (Vladimir Putin) ಅವರು ದ್ವಿಪಕ್ಷೀಯ ಸಹಕಾರದ ವಿಷಯಗಳ ಬಗ್ಗೆಯೂ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಬ್ಬರೂ ನಾಯಕರು ನಿಕಟ ಸಂಪರ್ಕದಲ್ಲಿರಲು ಒಪ್ಪಿಕೊಂಡಿದ್ದಾರೆ.
ಮಾತುಕತೆ ಬಳಿಕ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, ನನಗೆ ದೂರವಾಣಿ ಕರೆ ಮಾಡಿದ್ದಕ್ಕಾಗಿ ಮತ್ತು ಅಲಾಸ್ಕದಲ್ಲಿ ಅಧ್ಯಕ್ಷ ಟ್ರಂಪ್ ಅವರೊಂದಿಗಿನ ಇತ್ತೀಚಿನ ಭೇಟಿಯ ಕುರಿತು ಒಳನೋಟಗಳನ್ನು ಹಂಚಿಕೊಂಡಿದ್ದಕ್ಕಾಗಿ ನನ್ನ ಸ್ನೇಹಿತ, ರಷ್ಯಾ ಅಧ್ಯಕ್ಷ ಪುಟಿನ್ಗೆ ಧನ್ಯವಾದಗಳು.
ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ಭಾರತ ನಿರಂತರವಾಗಿ ಕರೆ ನೀಡಿದೆ. ಈ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಎಂದು ತಿಳಿಸಿದ್ದಾರೆ.
ಟ್ರಂಪ್ (Donald Trump) ಅವರನ್ನು ಭೇಟಿಯಾದ ನಂತರ, ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲಿನ ಯುದ್ಧವನ್ನು ನ್ಯಾಯಯುತ ಆಧಾರದ ಮೇಲೆ ಕೊನೆಗೊಳಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದ್ದಾರೆ.
ಚರ್ಚೆಯು ಸಮಯೋಚಿತ ಮತ್ತು ಉಪಯುಕ್ತವಾಗಿತ್ತು ಎಂದು ಪುಟಿನ್ ತಿಳಿಸಿದ್ದಾರೆ.
ನಾವು ಬಹಳ ಸಮಯದಿಂದ ಈ ರೀತಿಯ ನೇರ ಮಾತುಕತೆಗಳನ್ನು ನಡೆಸಿರಲಿಲ್ಲ. ನಮ್ಮ ನಿಲುವನ್ನು ಶಾಂತವಾಗಿ ಮತ್ತು ವಿವರವಾಗಿ ಪುನರುಚ್ಚರಿಸಲು ನಮಗೆ ಅವಕಾಶ ಸಿಕ್ಕಿತು.
ಸಂಭಾಷಣೆ ಸ್ಪಷ್ಟವಾಗಿ, ಅರ್ಥಪೂರ್ಣವಾಗಿತ್ತು ಎಂದು ಪುಟಿನ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಟ್ರಂಪ್, ಚರ್ಚೆಗೆ ಶ್ಲಾಘನೆ ವ್ಯಕ್ತಪಡಿಸಿದ್ದರು. ಆದರೆ, ಈ ಬಗ್ಗೆ ನಿರ್ದಿಷ್ಟ ವಿವರಗಳನ್ನು ನೀಡಲು ನಿರಾಕರಿಸಿದ್ದರು.
ನಾವು ಇನ್ನೂ ಆ ಹಂತಕ್ಕೆ ತಲುಪಿಲ್ಲ. ಆದರೆ, ನಾವು ಪ್ರಗತಿ ಸಾಧಿಸಿದ್ದೇವೆ. ಒಪ್ಪಂದವಾಗುವ ವರೆಗೆ ಯಾವುದೇ ಒಪ್ಪಂದವಿಲ್ಲ ಎಂದು ತಿಳಿಸಿದ್ದಾರೆ.