ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಹಾಗೂ ಕಾಂಗ್ರೆಸ್ ಪಕ್ಷದ ನಡುವಿನ ಸಂಘರ್ಷ ಮತ್ತೊಂದು ಮಜಲಿಗೆ ತಲುಪಿದೆ.
ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಗಳು ಹೆಚ್ಚಾದಂತೆ, ಇದೀಗ ಚುನಾವಣಾ ಆಯೋಗವು ತಿರುಗೇಟು ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿ ಚುನಾವಣಾ ಆಯೋಗವು ಇನ್ನು ಮುಂದೆ ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.
ಈ ವೇಳೆ, ಕರ್ನಾಟಕದ ಒಂದು ಕ್ಷೇತ್ರದಲ್ಲಿ ಚುನಾವಣಾ ಆಯೋಗವು ಮತ ಕಳ್ಳತನಕ್ಕೆ ಅವಕಾಶ ನೀಡಿದೆ ಎಂಬುದಕ್ಕೆ ಕಾಂಗ್ರೆಸ್ ಬಳಿ 100 ಪ್ರತಿಶತ ಪುರಾವೆಗಳಿದ್ದು,
ನಾವು ಅವುಗಳನ್ನು ಬಹಿರಂಗಪಡಿಸುತ್ತೇವೆ ಮತ್ತು ಪ್ರಜಾಪ್ರಭುತ್ವಕ್ಕೆ ಹಾನಿ ಮಾಡುವವರನ್ನು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಮುಂದುವರೆದು, ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರವನ್ನು ಪರಿಶೀಲಿಸಿದಾಗ, ಅಲ್ಲಿ ಬಹುಮಟ್ಟಿನ ಅಕ್ರಮಗಳು ಕಂಡುಬಂದಿದೆ ಎಂದ ಅವರು, ಆ ಕ್ಷೇತ್ರದಲ್ಲಿ 45, 50, 60, 65 ವರ್ಷದ ಸಾವಿರಾರು ಹೊಸ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ.
ಇದು ಕೇವಲ ಒಂದು ಕ್ಷೇತ್ರದ ಉದಾಹರಣೆ ಮಾತ್ರವಾಗಿದ್ದು, ಇಂತಹ ಅಕ್ರಮ ಸೇರ್ಪಡೆಗಳು ಇನ್ನೂ ಹಲವಾರು ಕ್ಷೇತ್ರಗಳಲ್ಲಿ ನಡೆಯುತ್ತಿವೆ.
ಇದರೊಂದಿಗೆ ಹಲವು ಕಡೆಗಳಲ್ಲಿ ಹೊಸ ಮತದಾರರ ಅಕ್ರಮ ಸೇರ್ಪಡೆ, ನಿಜವಾದ ಮತದಾರರ ಹೆಸರು ಅಳಿಸುವಿಕೆ ಸೇರಿದಂತೆ ಗಂಭೀರ ಅಕ್ರಮಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಏತನ್ಮಧ್ಯೆ, ಈ ಕುರಿತು ಎಲ್ಲಾ ಪುರಾವೆಗಳನ್ನು ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ.
ಸಂವಿಧಾನವು ಪ್ರಜಾಪ್ರಭುತ್ವದ ಮೂಲಾಧಾರ
ಇದಕ್ಕೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗವು, ಹೈಕೋರ್ಟ್ನಲ್ಲಿ ಚುನಾವಣಾ ಅರ್ಜಿ ಸಲ್ಲಿಸಿದ್ದರೆ, ಅದರ ನಿರ್ಧಾರಕ್ಕಾಗಿ ಕಾಯಬೇಕು. ಆಕಸ್ಮಾತ್, ಅರ್ಜಿಯನ್ನು ಸಲ್ಲಿಸದಿದ್ದರೆ, ಅಂತಹ ಆಧಾರರಹಿತ ಆರೋಪಗಳನ್ನು ಏಕೆ ಮಾಡುತ್ತಿದ್ದೀರಿ ಎಂದು ಕೇಳಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತ ವಿವಾದಕ್ಕೂ ಪ್ರತಿಕ್ರಿಯಿಸಿರುವ ಆಯೋಗವು ಭಾರತೀಯ ಸಂವಿಧಾನವನ್ನು ಪ್ರಜಾಪ್ರಭುತ್ವದ ಮೂಲಾಧಾರವೆಂದು ಉಲ್ಲೇಖಿಸಿ, ಮತದಾರರ ಪಟ್ಟಿಯಲ್ಲಿರುವ ನಕಲಿ ಅಥವಾ ಹಳೆಯ ನಮೂದುಗಳ ಬಗ್ಗೆ ಸಂಸ್ಥೆಯು ಕಣ್ಣು ಮುಚ್ಚಬೇಕೇ ಎಂದು ವಿಮರ್ಶಕರನ್ನು ಕೇಳಿದೆ.
“ಕೆಲವು ಜನರಿಂದ ದಾರಿ ತಪ್ಪಿದ ಚುನಾವಣಾ ಆಯೋಗವು, ಮೃತ ಮತದಾರರು, ವಲಸೆ ಬಂದ ಮತದಾರರು
ನಕಲಿ ನಮೂದುಗಳು ಅಥವಾ ವಿದೇಶಿ ಪ್ರಜೆಗಳ ಹೆಸರಿನಲ್ಲಿ ನಕಲಿ ಮತಗಳಿಗೆ ದಾರಿ ಮಾಡಿಕೊಡಬೇಕೇ?” ಎಂದು ಚುನಾವಣಾ ಆಯೋಗವು ವಾಕ್ಚಾತುರ್ಯದಿಂದ ಕೇಳಿದೆ.